ಎಚ್.ಡಿ.ಕೋಟೆ: ತಾಲೂಕಿನ ಚಿಕ್ಕಕೆರಯೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತೆ ವಸಂತಾ ನಾಗರಾಜ್ ಅವಿರೋಧವಾಗಿ ಆಯ್ಕೆಯಾದರು.
ನಾಗಮ್ಮ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ವಸಂತಾ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಬೋರಯ್ಯ ಅವಿರೋಧ ಆಯ್ಕೆ ಘೋಷಿಸಿದರು. ಫಲಿತಾಂಶ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ಮತ್ತು ಮುಖಂಡರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನೂತನ ಉಪಾಧ್ಯಕ್ಷೆ ವಸಂತಾ ನಾಗರಾಜ್ ಮಾತನಾಡಿ, ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಪ್ರತಿಯೊಬ್ಬರಿಗೂ ಚಿರಋಣಿ. ಮುಂದಿನ ದಿನಗಳಲ್ಲಿ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಹೇಳಿದರು.
ದರ್ಖಾಸ್ ಕಮಿಟಿ ಸದಸ್ಯ ಕೆಂಡಗಣ್ಣೇಗೌಡ ಮಾತನಾಡಿ, ನಮ್ಮ ಪಂಚಾಯಿತಿ ಕಾಂಗ್ರೆಸ್‌ನ ಭದ್ರಕೋಟೆ. ಕಾಂಗ್ರೆಸ್ ಬೆಂಬಲಿತೆ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್, ದರ್ಖಾಸ್ ಕಮಿಟಿ ಸದಸ್ಯ ಕೆಂಡಗಣ್ಣೇಗೌಡ, ಬಾಬು ಜಗಜೀವನರಾಮ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ.ನಾಗರಾಜು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಲಚಂದ್ರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರವಿ, ವಿಜೇಂದ್ರಗೌಡ, ಸದಸ್ಯರಾದ ರಮೇಶ್, ಸಣ್ಣಸ್ವಾಮಿ ನಾಯಕ, ಮಹೇಶ್, ಮಲ್ಲೇಶ್, ಭಾಗ್ಯಮ್ಮ ಪುಟ್ಟಾಚಾರಿ, ಸಿ.ಎನ್.ರವಿ, ಕೃಷ್ಣೇಗೌಡ, ಬಸವರಾಜು, ನಾಗೇಂದ್ರ, ಮಂಜು, ಮಂಜೇಗೌಡ, ಪ್ರಸನ್ನಕುಮಾರ್ ಇತರರು ಹಾಜರಿದ್ದರು.