ಬೆಳ್ತಂಗಡಿ: ಉಜಿರೆ ಗ್ರಾಮದ ಮಾಚಾರು ಎಂಬಲ್ಲಿ ಜೂನ್ 2ರಂದು ಮರಾಠಿ ನಾಯ್ಕ ಸಮುದಾಯದ ಅಶ್ವಥ್ ಎಂಬ ಯುವಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡನೀಯ. ನಮ್ಮ ಸಮುದಾಯದ ಮೇಲೆ ಈ ರೀತಿಯ ಘಟನೆಗಳು ಮುಂದುವರಿದರೆ ಬೀದಿಗಿಳಿಯುವುದು ಅನಿವಾರ್ಯ ಎಂದು ತಾಲೂಕು ಮರಾಠಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ವಸಂತ ನಡ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಚಾರು ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದ ಕರುಣಾಕರ ಗೌಡ ಎಂಬಾತ ಹೆಣ್ಣು ಮಕ್ಕಳಿಗೆ ನೀಡುತ್ತಿದ್ದ ಕಿರುಕುಳವನ್ನು ಅಶ್ವಥ್ ಪ್ರಶ್ನಿಸಿದ ಕಾರಣಕ್ಕಾಗಿ ಈ ಹಲ್ಲೆ ನಡೆಸಲಾಗಿದೆ. ಕರುಣಾಕರ ಗೌಡ ಈ ಹಿಂದೆ ಅಕ್ರಮ ಕಪ್ಪುಕಲ್ಲು ಗಣಿಗಾರಿಕೆ ಕೂಡ ನಡೆಸುತ್ತಿದ್ದರು.. ಸಣ್ಣಪುಟ್ಟ ಹಲ್ಲೆ, ದಾಂಧಲೆ, ಗೂಂಡಾಗಿರಿ ನಡೆಸುತಿದ್ದರು. ಅವರ ಮೇಲೆ ಹಲವು ಕೇಸ್‌ಗಳು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅಶ್ವಥ್ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಚಾರ ತಿಳಿದು ಕರುಣಾಕರ ಗೌಡ ತನ್ನ ತಾಯಿಯನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಮಾನಭಂಗಕ್ಕೆ ಯತ್ನ ನಡೆದಿದೆ ಎಂದು ಅಶ್ವಥ್ ಮತ್ತು ಮೇಲೆ ಸುಳ್ಳು ಕೇಸ್ ದಾಖಲಿಸಿರುವುದನ್ನು ಖಂಡಿಸುತ್ತೇವೆ. ಆರೋಪಿ ಕರುಣಾಕರ ಗೌಡನ ಈ ಹಿಂದಿನ ಎಲ್ಲ ಕೇಸ್‌ಗಳ ಆಧಾರದಲ್ಲಿ ಆತನನ್ನು ರೌಡಿಶೀಟರ್ ಪಟ್ಟಿಗೆ ಸೇರಿಸುವ ಮೂಲಕ ಆತನನ್ನು ಬೆಳ್ತಂಗಡಿ ತಾಲೂಕಿನಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಸಂಚಾಲಕ ಪ್ರಶಾಂತ್, ಮಾಚಾರ್ ವಿಶ್ವನಾಥ ನಾಯ್ಕ, ಶೇಖರ ಲಾಯಿಲ ಉಪಸ್ಥಿತರಿದ್ದರು.