ಜಿಲ್ಲೆ

ಡಿಟಿಎಂಎನ್ ಶಾಲಾ ವಸಂತೋತ್ಸವ

ಎ. ಆರ್. ರಘುರಾಮ

ಬೆಟ್ಟದಪುರ : ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವಲ್ಲಿ ಶಿಕ್ಷಕರು, ಪಾಲಕರು ಸಹಕರಿಸಬೇಕು ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಇಲ್ಲಿನ ಡಿಟಿಎಂಎನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಪ್ರಾಥಮಿಕ ವಿಭಾಗದ ಶಾಲಾ ವಸಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕೊಡುವುದು ಸುಲಭದ ಮಾತಲ್ಲ. ಈ ಸಂಸ್ಥೆ 23 ವರ್ಷಗಳಿಂದ ಬೆಳೆದು ಬಂದಿರುವ ಪರಿ ನಿಜಕ್ಕೂ ಮಾದರಿ ಎಂದರು. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಸಂಸ್ಥೆ ವೇದಿಕೆ ನೀಡಿದೆ. ನಾವು ಕಲಿಯುವ ಶಿಕ್ಷಣ ಸಮಾಜಕ್ಕೆ ಕೊಡುಗೆಯಾಗಿರಬೇಕು. ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲೂ ಇದೆ ಎಂದರು.

ಮೊಬೈಲ್ ಫೋನ್‌ನಿಂದ ದೂರವಿರಿ: ಕ್ಷೇತ್ರ ಶಿಕ್ಷಣಾಧಿಕಾರಿ ರವಿಪ್ರಸನ್ನ ಮಾತನಾಡಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂದರು. ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಶ್ರಮದ ಜತೆಗೆ ಗುಣಮಟ್ಟದ ಶಿಕ್ಷಣ ಲಭಿಸಿದರೆ ವಿದ್ಯಾರ್ಥಿ ಉನ್ನತ ವ್ಯಕ್ತಿಯಾಗಿ ಬೆಳೆಯುತ್ತಾನೆ. ಮೊಬೈಲ್ ಫೋನ್‌ನಿಂದ ಮಕ್ಕಳು ದೂರವಿರುವಂತೆ ಪಾಲಕರು, ಶಿಕ್ಷಕರು ಗಮನ ಹರಿಸಬೇಕು ಎಂದವರು ಸಲಹೆ ನೀಡಿದರು.