ಬಾಣಾವರದ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ವಸಂತ ಶ್ರೀರಾಮೋತ್ಸವಕ್ಕೆ ತೆರೆ. 
ಜಿಲ್ಲೆ

ವಸಂತ ಶ್ರೀರಾಮೋತ್ಸವಕ್ಕೆ ಸಂಭ್ರಮದ ತೆರೆ

ಅರಸೀಕೆರೆ ಗ್ರಾಮಾಂತರ: ಶ್ರೀರಾಮ ಪಟ್ಟಾಭಿಷೇಕದೊಂದಿಗೆ ತಾಲೂಕಿನ ಬಾಣಾವರದ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ವಸಂತ ಶ್ರೀರಾಮೋತ್ಸವಕ್ಕೆ ತೆರೆ ಬಿದ್ದಿದ್ದು, ಶ್ರೀರಾಮ ಭಕ್ತರ ಸಹಕಾರವೇ ಇದಕ್ಕೆ ಕಾರಣ ಎಂದು ಬಾಣಾವರ ಬ್ರಾಹ್ಮಣ ಸಮಾಜದ ಅಧ್ಯಕ್ಷ ಬಿ.ಎಸ್.ಗೋಪಾಲಕೃಷ್ಣ ಹೇಳಿದರು.

ಶ್ರೀರಾಮ ತಾರಕ ಹೋಮ, ಶ್ರೀರಾಮ ಪಟ್ಟಾಭಿಷೇಕದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಮಹೋತ್ಸವದ ಸೇವಾರ್ಥದಾರರ ಸಹಕಾರದಿಂದ ಸೀತಾ ಕಲ್ಯಾಣವೂ ನಡೆಯಿತು. ಸಮಾಜದ ಮಹಿಳೆಯರು ಪ್ರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು ಎಂದು ಸ್ಮರಿಸಿದರು.

ವೇದ ಬ್ರಹ್ಮ ಸಿ.ವಿ.ವೆಂಕಟಸುಬ್ರಮಣ್ಯ ಹಾಗೂ ಇತರರು ನಿತ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ನಡೆಸಿದ್ದಾರೆ. ರುದ್ರಾಭಿಷೇಕ, ರಾಮಾಯಣ ಪಾರಾಯಣ, ನವಗ್ರಹ ಜಪ, ಸೂರ್ಯ ನಮಸ್ಕಾರ, ಗಾಯಿತ್ರಿ ಜಪ, ಶ್ರೀರಾಮ ತಾರಕ ಜಪ, ಭಜನೆ, ಅಷ್ಟಾವಧಾನ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಿತ್ಯ ಸುಲಲಿತವಾಗಿ ನಡೆಯಿತು ಎಂದರು.

ಸಮಾಜದ ಕಾರ್ಯದರ್ಶಿ ಹರೀಶ್ ಶರ್ಮಾ ಮಾತನಾಡಿ, ನಿತ್ಯ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ನಡೆದಿದೆ ಎಂದರು.

ಸಂಘದ ಅರಸೀಕೆರೆ ತಾಲೂಕು ಅಧ್ಯಕ್ಷ ರವಿಕುಮಾರ್, ತಾಲೂಕು ಕಾರ್ಯದರ್ಶಿ ಸುಬ್ರಹ್ಮಣ್ಯ, ನಿರ್ದೇಶಕರಾದ ಡಿ.ಎಸ್. ಹರೀಶ್, ರಾಮಸ್ವಾಮಿ, ಬಾಣವರ ಸಂಘದ ಸಹ ಕಾರ್ಯದರ್ಶಿ ಬಿ.ಎಸ್.ಸುಬ್ಬಾಭಟ್ಟ ಮೊದಲಾದವರು ಉಪಸ್ಥಿತರಿದ್ದರು.