ಜಿಲ್ಲೆ

ನವಗ್ರಹ ತೀರ್ಥಕ್ಷೇತ್ರದಲ್ಲಿ ಮೃತ್ಯುಂಜಯ ಮಹಾಯಾಗ

ಹುಬ್ಬಳ್ಳಿ : ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಸ್ವರ್ಣ ಜನ್ಮಜಯಂತಿ ಮಹಾಮಹೋತ್ಸವದ ಎರಡನೇ ದಿನವಾದ ಮಂಗಳವಾರದಂದು ಹಲವಾರು ಧಾರ್ವಿುಕ ಕಾರ್ಯಕ್ರಮಗಳು ಇಲ್ಲಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಜರುಗಿದವು.

ಬೆಳಗ್ಗೆ 7 ಗಂಟೆಗೆ ನವಗ್ರಹ ತೀರ್ಥಕ್ಷೇತ್ರದಲ್ಲಿನ ಬಸದಿಯಲ್ಲಿ ಭಗವಾನ ಪಾರ್ಶ್ವನಾಥ ತೀರ್ಥಂಕರ ಮೂರ್ತಿಗೆ ಪಂಚಾಮೃತ ಅಭಿಷೇಕ ನಡೆಯಿತು. ನಂತರ ಮಹಾಶಾಂತಿ ಮಂತ್ರ, ಮಹಾಮಂಗಳಾರತಿ ನಡೆದವು.

ಶ್ರೀ ಗುಣಧರನಂದಿ ಮಹಾರಾಜರ ಸಾನ್ನಿಧ್ಯದಲ್ಲಿ ನಡೆದ ಮೃತ್ಯುಂಜಯ ಆರಾಧನೆಯಲ್ಲಿ ಧಾರವಾಡ ಹಾಗೂ ಅಕ್ಕಪಕ್ಕದ ಜಿಲ್ಲೆಗಳ 1008 ಶ್ರಾವಕಿಯರು ಪಾಲ್ಗೊಂಡಿದ್ದರು. ಸಾಮೂಹಿಕ ಮೃತ್ಯುಂಜಯ ಮಹಾಯಾಗದಲ್ಲಿ ಪಾಲ್ಗೊಂಡು, ಮಂತ್ರ ಜಪಿಸಿದರು. ಮೃತ್ಯುಂಜಯ ಮಹಾಯಾಗದಲ್ಲಿ ಭಾಗಿಯಾಗಿ, ಪೂಜೆ ಸಲ್ಲಿಸಿದರು. ತಮ್ಮ ಹಾಗೂ ಕುಟುಂಬದವರ ಆರೋಗ್ಯ ವೃದ್ಧಿಯಾಗಲಿ ಮತ್ತು ಆಯಸ್ಸು ಹೆಚ್ಚಾಗಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು, ಜೀವನ ನೀರಿನ ಗುಳ್ಳೆಯಂತೆ. ಯಾವಾಗ ಬೇಕಾದರೂ ಮಾಯವಾಗಬಹುದು. ಜೀವಿತ ಇದ್ದಷ್ಟು ಕಾಲ ಪರೋಪಕಾರಿಯಾಗಿ ಬಾಳಬೇಕು ಎಂದು ಸಲಹೆ ನೀಡಿದರು.

ಸನ್ಯಾಸಿ, ಆರೋಗ್ಯವಂತ, ರೋಗಿ ಯಾರೇ ಇದ್ದರೂ ಸಾವು ತಪ್ಪಿದ್ದಲ್ಲ. ಆದರೆ, ಸಾವು ಯಾವುದೇ ಸಮಯದಲ್ಲಿ ಬಂದರೂ, ಜೀವ ಪರಮಾತ್ಮನ ಪಾದದಲ್ಲೇ ಹೋಗಲೆಂದು ಪ್ರಾರ್ಥಿಸಬೇಕು ಎಂದರು.

ಉತ್ತಮ ಕ್ಷಮಾ ಅಂದರೆ ಕೇವಲ ಪೂಜಾ ಕ್ರಮ ಅಲ್ಲ. ಒಬ್ಬರ ಜತೆಗೆ ಜಗಳವಾಡಿ, ಅವರೊಂದಿಗೆ ಮುನಿಸಿಕೊಂಡಿದ್ದರೆ ಅವರ ಮನೆಗೆ ಹೋಗಿ ಕ್ಷಮೆ ಕೇಳಬೇಕು. ಇದರಿಂದ ದ್ವೇಷ ಮಾಯವಾಗಿ, ಪರಸ್ಪರ ವಿಶ್ವಾಸ ಬೆಳೆಯುತ್ತದೆ ಎಂದು ತಿಳಿಸಿದರು.

ಮುಂಬೈ ಉದ್ಯಮಿ ಸಂಜಯ ಮಿಂಡಾ ದಂಪತಿ ಇಂದ್ರ, ಇಂದ್ರಾಣಿಯಾಗಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪತ್ರಕರ್ತ ಅಜಿತ ಹನುಮಕ್ಕನವರ ಅವರಿಗೆ ನವಗ್ರಹ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.

ಕರ್ನಾಟಕ ಜೈನ್ ಅಸೋಸಿಯೇಶನ್ ಉಪಾಧ್ಯಕ್ಷ ಅಪ್ಪಾಸಾಹೇಬ ಪಾಟೀಲ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಸಂಜೆ ನವಗ್ರಹ ಮಹಾಆರತಿ ಹಾಗೂ ಹಿನ್ನೆಲೆ ಗಾಯಕ ವಿಜಯಪ್ರಕಾಶ ತಂಡದವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.