Varuna's irrigation in Mahalingapur 
ಜಿಲ್ಲೆ

ಮಹಾಲಿಂಗಪುರದಲ್ಲಿ ವರುಣನ ಸಿಂಚನ

ಮಹಾಲಿಂಗಪುರ: ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ದಟ್ಟವಾದ ಮೋಡ, ಗುಡುಗು ಮಿಂಚು ಸಹಿತ ಸುಮಾರು ಅರ್ಧ ತಾಸು ಸುರಿದ ಉತ್ತಮ ಮಳೆಗೆ ಬಿಸಿಲಿಂದಾಗಿ ಸುಡುತ್ತಿದ್ದ ಭೂಮಿ ತಂಪಾಯಿತು.

ಅನಿರೀಕ್ಷಿತವಾಗಿ ಏಕಾಏಕಿ ಸುರಿದ ಮಳೆಗೆ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಹೊರಗಡೆ ಇಟ್ಟಿದ್ದ ಸಾಮಗ್ರಿಗಳು ತೊಯ್ದು ಹಲವರು ತೊಂದರೆ ಅನುಭವಿಸಿದರು. ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ನೀರು ಹೊಕ್ಕಿದ್ದರಿಂದ ಮಳೆ ನಿಂತ ನಂತರ ಕಾರ್ಮಿಕರು ನೀರನ್ನು ಹೊರ ತೆಗೆಯುವ ಕಾರ್ಯದಲ್ಲಿ ಮಗ್ನರಾಗಿರುವುದು ಕಂಡು ಬಂದಿತು.

ಸ್ವಲ್ಪ ಮಳೆಯಿಂದ ಕಬ್ಬಿಗೆ ಅನುಕೂಲವಾಯಿತು. ನಾವು ಹರಿಸಿದ ನೀರು ಮಳೆ ಬಂದಂತೆ ಲ ನೀಡುವುದಿಲ್ಲ. ಮಳೆಯಿಂದಾಗಿ ಅವುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಡಾ.ಮಲ್ಲಪ್ಪ ಕಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.

ರಸ್ತೆ ನಿರ್ಮಾಣಕ್ಕೆ ಆಗ್ರಹ: ಗುರುವಾರ ಸುರಿದ ಚಿಕ್ಕ ಮಳೆಯಿಂದ ದಾನಮ್ಮದೇವಿ ನಗರದ ರಸ್ತೆಯಲ್ಲಿ ಬಿದ್ದಿರುವ ತಗ್ಗುಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಆಯಿತು. ಇನ್ನು ಮಳೆಗಾಲ ಬಂತೆಂದರೆ ನಾವು ಇಲ್ಲಿ ಸಂಚರಿಸುವುದು ದುಸ್ತರವಾಗುತ್ತದೆ. ಬೇಗ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.