ಜಿಲ್ಲೆ

ಮಡಿಕೇರಿ ದಸರಾಕ್ಕೆ ವರುಣನ ಸಹಕಾರ

ಸುನಿಲ್ ಪೊನ್ನೇಟಿ

ಮಡಿಕೇರಿ

ಶನಿವಾರ ಮುಂಜಾನೆಯ ಮಂಜು ಮುಸುಕಿದ‌ ವಾತಾವರಣ, ನಂತರ ಜಿಟಿ‌ಜಿಟಿ ಮಳೆ, ಮಧ್ಯಾಹ್ನದ ಹೊತ್ತಿಗೆ ಮಳೆಗಾಲ ನೆನಪಿಸುವಂತೆ‌ ಧೋ...ಎಂದು‌ ಸುರಿಯಲಾರಂಭಿಸಿದ ಮಳೆ. ಹತ್ತೂ ಮಂಟಪಗಳ ಪ್ರಮುಖರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿತ್ತು. ಮಡಿಕೇರಿ‌ ದಸರಾದ ಪ್ರಮುಖ  ಆರ್ಷಣೆಯಾಗಿರುವ ಮಂಟಪಗಳ‌ ತಯಾರಿಗೆ ಸುಮಾರು 3 ತಿಂಗಳ‌ ಕಾಲ ವ್ಯಯಿಸಿದ್ದ ಶ್ರಮ ನೀರ‌ ಮೇಲೆ ಹೋಮ ಆಗುವಂತೆ‌ ಕಂಡುಬರುತ್ತಿತ್ತು. ಹಾಗಾಗಿ ಮನಸ್ಸಿಗೆ ಬಂದ‌ ದೇವರ ಹೆಸರುಗಳನ್ನೆಲ್ಲಾ ಪ್ರಾರ್ಥಿಸುವಂತೆ ಆಗಿಬಿಟ್ಟಿತ್ತು.  ಆದರೆ ಮಧ್ಯಾಹ್ನ ನಂತರ ಆಕಾಶದಲ್ಲಿನ ಮೋಡ‌ ಕರಗಿ ಮಳೆರಾಯ ಕೃಪೆ ತೋರಿಸುವಂತೆ ಕಂಡುಬರುತ್ತಿದ್ದಂತೆಯೇ ದಶಮಂಟಪಗಳ ಪ್ರಮುಖರು‌ ನಿಟ್ಟುಸಿರು ಬಿಡುವಂತಾಯಿತು. ಮತ್ತೆ ಉತ್ಸಾಹದಿಂದಲೇ ಸಿದ್ಧತೆಯಲ್ಲಿ ತೊಡಗಿಕೊಂಡ ಮಂಟಪ‌ ಸಮಿತಿಯವರಿಗೆ ಶೋಭಾಯಾತ್ರೆ ಮುಗಿಯುವ ತನಕ ಮಳೆರಾಯ ಸಂಪೂರ್ಣವಾಗಿ‌ ಸಹಕರಿಸಿದ.

ದಸರಾ ಕೊನೆಯ ದಿನ ಸಂಪೂರ್ಣ ಮಡಿಕೇರಿಯೇ ಬಣ್ಣ ಬಣ್ಣದ ದೀಪಗಳಿಂದ ಝಗಮಗಿಸುತ್ತಿತ್ತು. ಶುಕ್ರವಾರದಿಂದಲೇ ಮಡಿಕೇರಿ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರಾದರೂ ಶನಿವಾರ ಸಂಜೆಯ ನಂತರ ಈ ಸಂಖ್ಯೆ 3 ಪಟ್ಟು ಹೆಚ್ಚಳವಾಯಿತು. ರಾತ್ರಿ ವೇಳೆಗೆ ಇಲ್ಲಿಯ ರಸ್ತೆಗಳೆಲ್ಲಾ ಪ್ರವಾಸಿಗರಿಂದ ತುಂಬಿಹೋಗಿತ್ತು. ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಂದಲೂ ಮಡಿಕೇರಿ ಕಡೆಗೆ ವಾಹನಗಳು ಬರುತ್ತಲೇ ಇದ್ದವು.

 ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ತಯಾರಿ ರಾತ್ರಿ ತನಕವೂ ಮುಂದುವರಿದಿತ್ತು. ಶೋಭಾಯಾತ್ರೆಗೆ ಎಲ್ಲರಿಗಿಂತಲೂ ಮೊದಲು ಹೊರಡುವ ಪೇಟೆ ಶ್ರೀರಾಮಮಂದಿರ ಮಂಟಪ 9 ಗಂಟೆಯ ಸುಮಾರಿಗೆ ಸಜ್ಜಾಗಿ ವೀಕ್ಷಕರ ದರ್ಶನಕ್ಕೆ ಲಭ್ಯವಾಗಿತ್ತು

ಹಿಂದಿನ ವರ್ಷಗಳ ಅನುಭವದ ಆಧಾರದಲ್ಲಿ ಪೊಲೀಸ್ ಇಲಾಖೆ ಈ ಬಾರಿ ಪೂರ್ಣ ಪ್ರಮಾಣದ‌ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಜನದಟ್ಟಣೆ ನಿಯಂತ್ರಣ, ವಾಹನ ಸಂಚಾರ ವ್ಯವಸ್ಥೆ ನಿಭಾಯಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಮಡಿಕೇರಿ ದಸರಾದಲ್ಲಿ ಸಾಮಾನ್ಯವಾಗಿರುತ್ತಿದ್ದ ಹೆಣ್ಣುಮಕ್ಕಳ ಚುಡಾಯಿಸುವಿಕೆ ಸೇರಿದಂತೆ ಕಿಡಿಗೇಡಿಗಳ ಇತರ ವರ್ತನೆಗೆ‌ ಕಡಿವಾಣ ಹಾಕುವಲ್ಲೂ ಪೊಲೀಸ್ ಇಲಾಖೆ ಉತ್ತಮ ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು. 'ಜಂಬೋ ಟೀಂ' ರಚನೆ ಬಗ್ಗೆ ವ್ಯಾಪಕ ಪ್ರಚಾರ ನೀಡಿದ್ದು ಕೂಡ ಈ ವಿಷಯದಲ್ಲಿ ಕೆಲಸ ಮಾಡಿತ್ತು. ಹಾಗಾಗಿ ಪೊಲೀಸರಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

ಪ್ರತಿ ವರ್ಷ ದಸರಾದಲ್ಲಿ ಕಿರಿಕಿರಿ ಮಾಡುತ್ತಿದ್ದ ಕರ್ಕಶ ಶಬ್ದ ಮಾಡುವ ಪೀಪಿಗಳಿಗೆ ಈ ಬಾರಿ ಸಂಪೂರ್ಣ ಕಡಿವಾಣ ಹಾಕಲಾಗಿತ್ತು. ಮುಖವಾಡಗಳ ಬಳಕೆ ನಿರ್ಬಂಧಿಸಿದ್ದು ಕೂಡ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಮಡಿಕೇರಿಯ ರಸ್ತೆ, ರಸ್ತೆಗಳಲ್ಲಿ ಮಾತ್ರವಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಆಗಿದ್ದ ಗಾಂಧಿ ಮೈದಾನದಲ್ಲೂ ಜನಸಾಗರವೇ ಕಂಡು ಬಂತು. ಕಲಾಸಂಭ್ರಮ ವೇದಿಕೆಯಲ್ಲಿ ಸ್ಥಳೀಯ ಕಲಾವಿದರ ಜತೆಗೆ ಖ್ಯಾತ ಕಲಾವಿದರ ಕಾರ್ಯಕ್ರಮಗಳೂ ಜನ‌ಮೆಚ್ಚುಗೆಗೆ ಪಾತ್ರವಾದವು. ಸಂಗೀತ‌ ನಿರ್ದೇಶಕ ಸಾಧುಕೋಕಿಲ ನೇತೃತ್ವದ ತಂಡ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮವೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯಿತು.

ಜಿಲ್ಲೆಯ ಮೂಲೆ ಮೂಲೆಗಳಿಂದಲೂ ದಸರಾ ವೀಕ್ಷಣೆಗೆ ಮಡಿಕೇರಿಗೆ ಕಲಾಭಿಮಾನಿಗಳು ಬಂದಿದ್ದರು. ಬಹುತೇಕ ಪ್ರವಾಸಿಗರು ಶನಿವಾರ ಬೆಳಗ್ಗೆ ನೇರವಾಗಿ ಮಡಿಕೇರಿಗೆ ಆಗಮಿಸಿದ್ದರೆ ಇನ್ನೂ ಹೆಚ್ಚಿನವರು ಮೈಸೂರು ದಸರಾ ಮುಗಿಸಿಕೊಂಡು ಮಡಿಕೇರಿಯತ್ತ ಪ್ರಯಾಣ ಬೆಳೆಸಿದ್ದರು. ಹಾಗಾಗಿ ಸಂಜೆ 4 ಗಂಟೆ ನಂತರ ರಾಷ್ಟ್ರೀಯ ಹೆದ್ದಾರಿ 275ರ ಮೈಸೂರು-ಕುಶಾಲನಗರ-ಮಡಿಕೇರಿ ಮಾರ್ಗದಲ್ಲಿ ದೊಡ್ಡ ಮಟ್ಟದಲ್ಲಿ ವಾಹನ ದಟ್ಟಣೆ ಕಂಡುಬಂತು.

ದಸರಾ ಪ್ರಭಾವ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ‌ ಮೇಲೂ ಭಾನುವಾರ ಕಂಡು ಬಂತು. ಶನಿವಾರ ರಾತ್ರಿಯ ಮಡಿಕೇರಿ ದಸರಾ ವೀಕ್ಷಣೆ ಮುಗಿಸಿದ ಪ್ರವಾಸಿಗರು ಭಾನುವಾರ ಪ್ರವಾಸಿತಾಣಗಳಿಗೆ ದಾಂಗುಡಿ ಇಟ್ಟರು. ಕುಶಾಲನಗರ ಸುತ್ತಲಿನ ಪ್ರವಾಸಿ ತಾಣಗಳಾದ ಗೋಲ್ಡನ್‌ಟೆಂಪಲ್, ಕಾವೇರಿ ನಿಸರ್ಗಧಾಮ, ಹಾರಂಗಿ, ಚಿಕ್ಲಿಹೊಳೆ, ದುಬಾರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದರು. ಮಡಿಕೇರಿ ಸಮೀಪದ ಪ್ರವಾಸಿತಾಣಗಳಾದ ಅಬ್ಬಿಫಾಲ್ಸ್, ಮಾಂದಲ್ ಪಟ್ಟಿ, ರಾಜಾಸೀಟ್‌ನಲ್ಲೂ ಪ್ರವಾಸಿಗರ ದಟ್ಟಣೆ ಇತ್ತು. ಧಾರ್ಮಿಕ ಕ್ಷೇತ್ರಗಳಾದ ಮಡಿಕೇರಿ ಓಂಕಾರೇಶ್ವರ ದೇವಾಲಯ, ಭಾಗಮಂಡಲ, ತಲಕಾವೇರಿ ಕಡೆಗೂ ಪ್ರವಾಸಿಗರು ಭೇಟಿ ಕೊಟ್ಟಿದ್ದರು.

ಶುಕ್ರವಾರದಿಂದಲೇ ದುಬಾರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಈ ಸಂಖ್ಯೆ ಇನ್ನೂ ಜಾಸ್ತಿ ಇತ್ತು. ದಸರಾ ರಜೆ ಇರುವುದರಿಂದ ಇನ್ನೂ 2-3 ದಿನ ಪ್ರವಾಸಿಗರ ಸಂಖ್ಯೆ ಹೆಚ್ಚು ಇರುವ ಸಾಧ್ಯತೆ ಇದೆ. ಆದರೆ ದುಬಾರೆಯಲ್ಲಿ ಹೆಚ್ಚಿನ ಶುಲ್ಕ‌ ವಿಧಿಸುವ ಮೂಲಕ ಅರಣ್ಯ ಇಲಾಖೆ ಪ್ರವಾಸಿಗರ ಸುಲಿಗೆ ಮಾಡುತ್ತಿದೆ.

ಕೆ.ಜಿ. ಮನು, ದುಬಾರೆ‌ ನಿವಾಸಿ

ತಲಕಾವೇರಿ ಜಾತ್ರೆಗೆ ಇನ್ನು 4 ದಿನ ಮಾತ್ರ ಇದೆ. ಆದರೆ ಈಗಲೇ ಇಲ್ಲಿ ಜಾತ್ರೆಯ ವಾತಾವರಣ ಕಂಡು‌ ಬರುತ್ತಿದೆ. ಮಡಿಕೇರಿ ದಸರಾ ಮುಗಿಸಿ‌ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭಾಗಮಂಡಲ, ತಲಕಾವೇರಿಗೆ ಬರುತ್ತಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪ್ರವಾಸಿಗರು ಹೆಚ್ಚು‌ ಬರುತ್ತಿರುವಂತೆ ಕಂಡು‌ಬರುತ್ತಿದೆ.

ಶ್ರೀನಾಥ್, ಭಾಗಮಂಡಲ‌ ನಿವಾಸಿ

ಈ ಬಾರಿ ದಸರಾದಲ್ಲಿ ಪೊಲೀಸರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ವ್ಯವಸ್ಥೆಗಳು ಅಚ್ಚುಕಟ್ಟಾಗಿದ್ದವು. ಪೀಪಿ ಮತ್ತು ಮುಖವಾಡಗಳಿಗೆ ಕಡಿವಾಣ ಹಾಕಿದ್ದು ಉತ್ತಮ ಬೆಳವಣಿಗೆ.

ಹೇಮಂತ್ ಪಾರೇರ, ಯಡವನಾಡು‌ ನಿವಾಸಿ