ಜಿಲ್ಲೆ

ಕರಾವಳಿ, ಮಲೆನಾಡಲ್ಲಿ ಮುಂದುವರಿದ ವರುಣಾರ್ಭಟ: ನಾಳೆ 7 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಎಚ್ಚರಿಕೆ

ಬೆಂಗಳೂರು: ರಾಜ್ಯದ ಹಲವೆಡೆ ಮಂಗಳವಾರವೂ ಧಾರಾಕಾರವಾಗಿ ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಮಲೆನಾಡು ಮತ್ತು ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಬರೋಬ್ಬರಿ 150 ಮಿಮೀ ಗಿಂತ ಅಧಿಕ ಮಳೆ ಸುರಿದಿರುವುದು ವರದಿಯಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮುಂದಿನ 2 ದಿನ ಹಾಗೂ ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮೇ 28ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್​ ಅಲರ್ಟ್ ಕೊಟ್ಟಿದೆ. ಈ ಅವಧಿಯಲ್ಲಿ 202 ಮಿಮೀವರೆಗೆ ಮಳೆ ಸುರಿಯುವ ಸಂಭವ ಇದೆ.

ಅಲ್ಲದೆ, ಈ ಮೇಲಿನ ಜಿಲ್ಲೆಗಳಲ್ಲಿ ಮೇ 30ರಿಂದ ಮುಂದಿನ 3 ದಿನ ಆರೆಂಜ್​ ಅಲರ್ಟ್​ ಇರಲಿದೆ. ಕರಾವಳಿ ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಸಣ್ಣ ಹಡುಗುಗಳು ಓಡಾಡಬಾರದು. ಸಮುದ್ರ ತೀರದ ಸಮೀಪ ಮನರಂಜನಾ ಚುಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಇಲಾಖೆ ಸೂಚಿಸಿದೆ.

ಹಾಸನ, ಕೊಡಗು, ವಿಜಯಪುರದಲ್ಲಿ ಮೇ 28ರಿಂದ ಮುಂದಿನ 2 ದಿನ, ಬೀದರ್​, ಧಾರವಾಡ, ಕಲಬುರಗಿ, ರಾಯಚೂರು, ಯಾದಗಿರಿ, ಚಾಮರಾಜನಗರ, ದಾವಣಗೆರೆ, ಮೈಸೂರು ಮತ್ತು ವಿಜಯನಗರದಲ್ಲಿ ಮೇ 27ರಂದು ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ಹೊರತುಪಡಿಸಿ ಉಳಿದೆಡೆ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.

ಬೆಂಗಳೂರಿನಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣದೊಂದಿಗೆ ಹಗುರದಿಂದ ಕೂಡಿದ ಸಾಧಾರಣ ವರ್ಷಧಾರೆಯಾಗಲಿದೆ. ಗರಿಷ್ಠ, ಕನಿಷ್ಠ ತಾಪಮಾನ ಕ್ರಮವಾಗಿ 28 ಡಿ.ಸೆ ಮತ್ತು 20 ಡಿ.ಸೆ. ಇರಲಿದೆ.