ಹೊಳೆಆಲೂರ: ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಸುರಿದ ಭಾರಿ ಮಳೆಯಿಂದ ಬಿತ್ತನೆ ಮಾಡಿ ಬಾಡುತ್ತಿರುವ ಬೆಳೆಗೆ ದೇವರು ಪ್ರಸಾದ ಕೊಟ್ಟಂತಾದರೆ, ಮತ್ತೊಂದೆಡೆ ಹುನಗುಂಡಿ, ಬೆನಹಾಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್. ಬೇಲೇರಿ, ಹುಲ್ಲೂರ ಗ್ರಾಮಗಳ ರೈತರ ನೂರಾರು ಎಕರೆ ಬೆಳೆ ನಾಶವಾಗಿದೆ. ಮುಂಗಾರು ಕೈಕೊಟ್ಟ ಪರಿಣಾಮ ಕಡಿಮೆ ಖರ್ಚಿನ ಹೆಸರು ಬೆಳೆಯಿಂದ ರೈತರು ವಂಚಿತರಾಗಿದ್ದರು. ತಡವಾಗಿ ಬಂದ ಅಲ್ಪ- ಸ್ವಲ್ಪ ಮಳೆಗೆ ಗೋವಿನ ಜೋಳ, ಮೆಣಸಿನಕಾಯಿ, ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದರು. ಹವಾಮಾನ ಇಲಾಖೆಯ ಮುನ್ಸೂಚನೆ ನಂಬಿ ಸಾಲ ಮಾಡಿ ನಾಲ್ಕಾರು ದಿನಗಳ ಹಿಂದೆ ರಸಗೊಬ್ಬರ ಸಿಂಪಡಣೆ ಮಾಡಿದ್ದರು. ಆದರೆ, ಆಕಸ್ಮಿಕವಾಗಿ ತುಂಬಿ ಹರಿದ ಹಿರೇಹಳ್ಳದ ನೀರಿನ ರಭಸಕ್ಕೆ ಗೋವಿನಜೋಳ, ಮೆಣಸಿನಕಾಯಿ, ಉಳ್ಳಾಗಡ್ಡಿ ಸಂಪೂರ್ಣ ನಾಶವಾಗಿದೆ. ಹಳ್ಳದ ನೀರಿನ ಸೆಳೆತಕ್ಕೆ ಬೆಳೆ ನಾಶದೊಂದಿಗೆ ಹೊಳೆಹಡಗಲಿ- ಬಸರಕೋಡ ಮಧ್ಯದ ಡಾಂಬರ್ ರಸ್ತೆ ಕಿತ್ತು ಹೋಗಿದೆ. ಹೊಳೆಆಲೂರಿನಿಂದ ಅಮರಗೋಳ, ಬಿ.ಎಸ್. ಬೇಲೇರಿ, ಬಸರಕೋಡ ಗ್ರಾಮದ ಸಂಪರ್ಕ ಕಡಿತವಾಗಿದೆ. ಶ್ರಾವಣ ಮಾಸದ ಅಂಗವಾಗಿ ಈ ಭಾಗದ ರೈತರು ಶಿರೋಳ ಸಮೀಪದ ಕಲ್ಲಾಪೂರ ದರ್ಶನಕ್ಕೆ ಎತ್ತಗಳೊಂದಿಗೆ ಹೋಗುವುದು ವಾಡಿಕೆ. ಆದರೆ, ಏಕಾಏಕಿ ತುಂಬಿ ಹರಿಯುತ್ತಿರುವ ಹಿರೇಹಳ್ಳದ ಪ್ರವಾಹದಿಂದ ಸಂಪರ್ಕ ಕಡಿತವಾಗಿದೆ. ಇದರಿಂದ ಗ್ರಾಮಗಳಿಗೆ ಮರಳಲಾಗದೆ ಹೊಳೆಆಲೂರಿನ ಬಸ್ ನಿಲ್ದಾಣದ ಹತ್ತಿರ ಎತ್ತುಗಳೂಂದಿಗೆ ಠಿಕಾಣಿ ಹೂಡಿದ್ದಾರೆ.