ಹೊನ್ನಾಳಿ: ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಭಾನುವಾರವೂ ಮುಂದುವರಿದಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಕ್ಕಳು, ವಯೋವೃದ್ಧರಿಗೆ ಜ್ವರ, ನೆಗಡಿಯಂತ ಸಣ್ಣಪುಟ್ಟ ಖಾಯಿಲೆಗಳು ಕಾಣಿಸಿಕೊಳ್ಳುತ್ತಿದೆ.
ಜನರು ಮನೆಯಿಂದ ಹೊರಬಾರದೆ ಮನೆಯಲ್ಲೇ ಉಳಿದಿದ್ದಾರೆ. ಮಕ್ಕಳು ಶಾಲೆಗೆ ತೆರಳಲು ಪರದಾಡುವಂತಾಗಿದೆ.
ಮಳೆ ವಿವರ: ಹೊನ್ನಾಳಿ 16.6 ಮಿ.ಮೀ, ಹರಳಹಳ್ಳಿ 17.2, ಕುಂದೂರು 24.8, ಸಾಸ್ವೆಹಳ್ಳಿ 21.6 ಮಿ.ಮೀಟರ್ ಮಳೆಯಾಗಿದೆ.
ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿ ನೀರಿನ ಮಟ್ಟ ಭಾನುವಾರ ಹೆಚ್ಚಾಗಿದೆ.
ಮನವಿ: ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ತುಂಗಭದ್ರಾ ನದಿ ಪಾತ್ರದಲ್ಲಿರುವ ಸಾರ್ವಜನಿಕರು ನದಿಗೆ ಇಳಿಯಬಾರದು ಹಾಗೂ ಜಾನುವಾರುಗಳನ್ನು ನೀರು ಕುಡಿಸಲಿಕ್ಕೆ ಹೋಗುವಾಗ ಎಚ್ಚರ ವಹಿಸಬೇಕು ಎಂದು ತಹಸೀಲ್ದಾರ್ ತಿರುಪತಿ ಪಟೀಲ್ ಮನವಿ ಮಾಡಿದ್ದಾರೆ.