ಬೆಂಗಳೂರು: ‘ಕಿತ್ತೋದ್ ನನ್ ಮಗ’ ಹೇಳಿಕೆ ತಿರುಚಿ, ಅಪಪ್ರಚಾರ ಮಾಡಲಾಗುತ್ತಿದೆ ಎಂದು ನಟ ಜಗ್ಗೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.
ವರ್ತೂರು ಸಂತೋಷ್ ಹುಲಿ ಉಗುರಿನ ಲಾಕೆಟ್ ಧರಿಸಿ ಬಿಗ್ ಬಾಸ್ ಮನೆಗೆ ಹೋಗಿದ್ದಾಗ ಬಂಧಿಸಲಾಗಿತ್ತು. ಆ ಬಳಿಕ ಹುಲಿ ಉಗುರು ಹೊಂದಿದ ಆರೋಪದಲ್ಲಿ ಅನೇಕ ಸೆಲೆಬ್ರಿಟಿಗಳು ಕಾನೂನಿನ ಸಂಕಷ್ಟ ಎದುರಿಸಿದ್ದರು. ಜಗ್ಗೇಶ್ ಅವರಿಗೂ ನೋಟಿಸ್ ನೀಡಲಾಗಿತ್ತು.
ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಜಗ್ಗೇಶ್, 'ಯಾವನೋ ಕಿತ್ತೋದ್ ನನ್ ಮಗ, ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ..'ಎಂದಿದ್ದರು. ಜಗ್ಗೇಶ್ ಮಾತನಾಡಿದ ರೀತಿಯನ್ನು ಅನೇಕರು ಖಂಡಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಆಗಿತ್ತು. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಗ್ಗೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ತಮ್ಮ ಹೇಳಿಕೆಯನ್ನು ತಿರುಚಿ, ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಮಾಡಿ ಹೆಬ್ಬಗೋಡಿಯ ನಾರಾಯಣಸ್ವಾಮಿ ಮತ್ತು ಇನ್ನೋರ್ವ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜಾತಿನಿಂದನೆ ,ಅವಾಚ್ಯ ಪದಗಳ ಬಳಕೆ, ಮುಖಕ್ಕೆ ಮಸಿ ಬಳಿಯುವ ಬೆದರಿಕೆ ಹಾಕಲಾಗಿದೆ ಎಂದು ಜಗ್ಗೇಶ್ ಅವರು ಆರೋಪ ಮಾಡಿದ್ದಾರೆ.
‘ತಪ್ಪು ಸಂದೇಶ ಕೊಟ್ಟು ಜಾತಿ ಗಲಭೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡಲಾಗುತ್ತಿದೆ. ಕಿತ್ತೋದ್ ನನ್ ಮಗ ಎಂಬುದು ಗ್ರಾಮೀಣ ಭಾಷೆಯಾಗಿದ್ದು, ಅದನ್ನು ತಿರುಚಿ ಪ್ರಚೋದಿಸಲಾಗುತ್ತಿದೆ’ ಎಂದು ಜಗ್ಗೇಶ್ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.