ಜಿಲ್ಲೆ

ವರ್ತೂರು ಸಂತೋಷ್ ಜಾಮೀನು ಅರ್ಜಿ ಆದೇಶ ನಾಳೆ ಪ್ರಕಟ

ಮಂಜುನಾಥ.ಕೆ

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಕಾರಣಕ್ಕೆ ಬಂಧಿತರಾಗಿರುವ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ ೨ನೇ ಎಸಿಜೆಎಂ ನ್ಯಾಯಾಲಯ, ಶುಕ್ರವಾರಕ್ಕೆ ಆದೇಶ ಕಾಯ್ದಿರಿಸಿದೆ.
ಸಂತೋಷ್ ಅವರು ಕೊರಳಿಗೆ ಹಾಕಿದ್ದ ಪೆಂಡೆಂಟ್‌ನಲ್ಲಿ ಹುಲಿಯ ಉಗುರು ಇರುವುದನ್ನು ಗಮನಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಬಿಗ್‌ಬಾಸ್ ಶೋನ ಚಿತ್ರೀಕರಣ ನಡೆಯುತ್ತಿರುವ ಬಿಡದಿ ಬಳಿಯ ಬಿಗ್‌ಬಾಸ್ ಮನೆಗೆ ತೆರಳಿ ಅ.೨೨ರಂದು ಸಂತೋಷ್ ಅವರನ್ನು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣ ಸಂಬಂಧ ಪ್ರಾಥಮಿಕ ಮಾಹಿತಿ ಪಡೆದ ನ್ಯಾಯಾಲಯ ಸಂತೋಷ್‌ನನ್ನು ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ನಂತರ ಸಂತೋಷ್ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಬುಧವಾರಕ್ಕೆ ನಿಗದಿಯಾಗಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಸಂತೋಷ್ ಬಂಧನಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸದ ಕಾರಣ ವಿಚಾರಣೆ ನಡೆದಿರಲಿಲ್ಲ. ಗುರುವಾರ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಸಂತೋಷ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದರು.
ಸರಿಯಾದ ನಿಯಮಾವಳಿ ಪಾಲಿಸಿಲ್ಲ
‘‘ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಕಕ್ಷಿದಾರ ಸಂತೋಷ್ ಅವರ ಬಂಧನದ ವಿಚಾರದಲ್ಲಿ ನಿಯಮಾವಳಿ ಪಾಲಿಸಿಲ್ಲ. ಸಂತೋಷ್ ವಿಚಾರಣೆ ನಡೆಸಿ ಮಾಹಿತಿ ಪಡೆದು, ಪೆಂಡೆಂಟ್‌ನ ಸತ್ಯಾಸತ್ಯತೆ ಪರಿಶೀಲಿಸಬೇಕಿತ್ತು. ಆದರೆ, ಅಧಿಕಾರಿಗಳು ಅದ್ಯಾವುದನ್ನೂ ಮಾಡದೆ ನೇರವಾಗಿ ಬಿಗ್ ಬಾಸ್ ಶೋ ನಡೆಯುತ್ತಿದ್ದ ಮನೆಗೆ ನುಗ್ಗಿ ಬಂಧಿಸಿದ್ದಾರೆ ಎಂದು ಸಂತೋಷ್ ಪರ ವಕೀಲ ಕೆ.ನಟರಾಜ್ ವಾದ ಮಂಡಿಸಿದರು.
‘‘ವರ್ತೂರು ಸಂತೋಷ್ ಕಾಡು ಪ್ರಾಣಿಯ ಜೀವಿಸುವ ಹಕ್ಕು ಕಸಿದುಕೊಂಡಿದ್ದಾರೆ. ಜತೆಗೆ, ಅವರ ಜಾಮೀನು ಅರ್ಜಿಯಲ್ಲಿನ ವಿವರಗಳು ಸುಳ್ಳಿನಿಂದ ಕೂಡಿವೆ. ಅವರಿಗೆ ಹುಲಿಯ ಉಗುರು ಹೇಗೆ ಸಿಕ್ಕಿತೆಂದು ಅರ್ಜಿಯಲ್ಲಿ ಹೇಳಿಲ್ಲ. ಜಾಮೀನು ನೀಡಿದರೆ ಸಂತೋಷ್ ತಲೆಮರೆಸಿಕೊಳ್ಳಬಹುದು. ಅಲ್ಲದೆ, ಆರೋಪಿಯು ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ಪ್ರಕರಣದ ಎರಡು ಮತ್ತು ಮೂರನೇ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ, ಆರೋಪಿಗೆ ಜಾಮೀನು ನೀಡಬಾರದು ಎಂದು ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಅ.೨೭ಕ್ಕೆ ಆದೇಶ ಕಾಯ್ದಿರಿಸಿ ಕಲಾಪ ಮುಂದೂಡಿದರು.
ಸಂತೋಷ್‌ಗೆ ಜಾಮೀನು ಸಿಗುವ ವಿಶ್ವಾಸವಿದೆ
‘‘ವರ್ತೂರು ಸಂತೋಷ್ ಕೃಷಿ ಹಿನ್ನೆಲೆಯಿಂದ ಬಂದವರು. ಅವರು ಯಾವುದೇ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಲ್ಲ, ಬಹಳ ಹಿಂದಿನಿಂದಲೂ ಪೂಜಿಸಿಕೊಂಡು ಬಂದ ಹುಲಿ ಉಗುರು ಅದು. ಅಧಿಕಾರಿಗಳು ವರ್ತೂರು ಸಂತೋಷ್ ವಿರುದ್ಧ ಹುಲಿಯನ್ನು ಕೊಂದು, ಉಗುರು ತಂದಿರುವಂತಹ ಸೆಕ್ಷನ್‌ಗಳಡಿ ಪ್ರಕರಣ ದಾಖಲಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ನಮ್ಮ ವಾದ ಪುರಸ್ಕರಿಸಿ ಸಂತೋಷ್ ಅವರಿಗೆ ಜಾಮೀನು ನೀಡುವ ವಿಶ್ವಾಸವಿದೆ ಎಂದು ವಕೀಲ ನಟರಾಜ್ ಹೇಳಿದರು.
‘‘ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಅರಣ್ಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅವರ ಬಳಿಯಿದ್ದ ಪೆಂಡೆಂಟ್ ವಶಕ್ಕೆ ಪಡೆದು ಎಫ್‌ಎಸ್‌ಎಲ್ಗೆ ಕಳುಹಿದ್ದಾರೆ. ಆದರೆ, ವರ್ತೂರು ಸಂತೋಷ್ ವಿರುದ್ದ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದರು.