ಜಿಲ್ಲೆ

ವಿವಿಧ ಕಾಮಗಾರಿಗಳಿಗೆ ಚಾಲನೆ 23ಕ್ಕೆ

Mysuru - Desk - Ravikumar

ಕೆ.ಆರ್. ನಗರ : ಪಟ್ಟಣದ ಬಯಲು ರಂಗ ಮಂದಿರದಲ್ಲಿ ಸರ್ಕಾರದ ಸವಲತ್ತುಗಳ ವಿತರಣೆ ಮತ್ತು 300 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ 23ಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಸಂಗೊಳ್ಳಿರಾಯಣ್ಣ ಸಮುದಾಯ ಭವನದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾಗಿದ್ದ ಮುಖ್ಯಮಂತ್ರಿಗಳ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೇ 20ಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ತುಂಬಲಿದೆ. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಕಾರಣ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿರಿಸುವುದರ ಜತೆಗೆ ಕಳೆದ ಬಿಜೆಪಿ ಸರ್ಕಾರದಲ್ಲಿ ಅನುಮೋದನೆಗೊಂಡ ಕಾಮಗಾರಿಗಳಿಗೆ ಹಣ ನೀಡಬೇಕಾಗಿತ್ತು ಎಂದು ಮಾಹಿತಿ ನೀಡಿದರು.

ಚುನಾವಣಾ ಪೂರ್ವದಲ್ಲಿ ಪಕ್ಷದಿಂದ ನಡೆಸಲಾದ ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ನಾನು ಬದ್ಧನಾಗಿದ್ದು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು ಎಲ್ಲ ಗ್ರಾಮಗಳಿಗೆ ಅನುದಾನ ಹಂಚಿಕೆ ಮಾಡುವುದರ ಜತೆಗೆ ಸಾಲಿಗ್ರಾಮ ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಮಿರ್ಲೆ ಮತ್ತು ಭೇರ್ಯ ಗ್ರಾಮವನ್ನು ಸಾಲಿಗ್ರಾಮದ ಹೋಬಳಿ ಕೇಂದ್ರವನ್ನಾಗಿ ಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಿರ್ಲೆ ಸೇರಿದಂತೆ ಸುತ್ತಮುತ್ತಲ ಗ್ರಾಮದ ಕೆರೆ ಕಟ್ಟೆ ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಏತನೀರಾವರಿ ಯೋಜನೆಗಾಗಿ 60 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಕೆ.ಆರ್.ನಗರ ತಾಲೂಕಿನ ಸೌತನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರ ಜಮೀನಿಗೆ ಸರಾಗವಾಗಿ ನೀರು ಹರಿಸುವ ಸಲುವಾಗಿ ನಾಲೆಗಳ ಆಧುನೀಕರಣ ಮಾಡಲು ನೀರಾವರಿ ಇಲಾಖೆಯಿಂದ 45 ಕೋಟಿ ರೂ. ಮಂಜೂರಾಗಿದೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಪುರಸಭೆಯ ಚುನಾವಣೆ ನಡೆಯಲಿದ್ದು, ಈ ಎಲ್ಲ ಆಕಾಂಕ್ಷಿಗಳು ಮತ್ತು ಮುಂಚೂಣಿ ಘಟಕಗಳ ನಾಯಕರು ಹೆಚ್ಚು ಜನರನ್ನು ಕರೆ ತಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರದಲ್ಲಿ ಹಣವಿಲ್ಲದೆ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅಪಪ್ರಚಾರ ಮಾಡುತ್ತಿರುವವರಿಗೆ ಸರ್ಕಾರ ಗ್ಯಾರಂಟಿ ಯೋಜನೆಯ ಜತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಹಣ ನೀಡುತ್ತಿದೆ ಎಂಬುದನ್ನು ಮನದಟ್ಟು ಮಾಡಿ ತೋರಿಸಲು ಈ ಕಾರ್ಯಕ್ರಮ ಒಂದು ವೇದಿಕೆಯಾಗಿದೆ. ಎರಡು ವರ್ಷ

ಗಳ ನಂತರ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಒಟ್ಟಿಗೆ ಈ ಕಾರ್ಯಕ್ರಮ ಮಾಡಲಿದ್ದಾರೆ ಎಂದರು.

ಕಾರ್ಯಕ್ರಮವನ್ನು ಕುರಿತು ಪುರಸಭಾ ಅಧ್ಯಕ್ಷ ಶಿವುನಾಯಕ್, ಜಿ.ಪಂ. ಮಾಜಿ ಸದಸ್ಯ ಮಾರ್ಚಹಳ್ಳಿ ಶಿವರಾಮು, ಮುಖಂಡರಾದ ಕಲ್ಲಹಳ್ಳಿ ಶ್ರೀನಿವಾಸ್, ಸಿ.ಪಿ.ರಮೇಶ್, ಎಸ್.ಪಿ.ತಮ್ಮಯ್ಯ, ಎ.ಆರ್.ಕಾಂತರಾಜು, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲತಾರವಿಶಂಕರ್, ಕುರಿ ಮತ್ತು ಮೇಕೆ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಎಂ.ರಮೇಶ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್ ಶಂಕರ್, ಸದಸ್ಯ ಶಂಕರ್‌ಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಬಿ.ಟಿ.ಮಹದೇವ್, ಬೋರೇನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯಶಂಕರ್, ಮಹಿಳಾ ಘಟಕದ ಅಧ್ಯಕ್ಷೆ ರಾಣಿ, ನಗರಾಧ್ಯಕ್ಷ ಎಂ.ಜೆ.ರಮೇಶ್, ಎಸ್‌ಸ್ಸಿ ಘಟಕದ ತಾಲೂಕು ಅಧ್ಯಕ್ಷ ನಂದೀಶ್, ಯುವ ಘಟಕದ ನಗರಾಧ್ಯಕ್ಷ ಕೆಂಚಿಮಂಜು ಇತರರು ಇದ್ದರು.