ಜಿಲ್ಲೆ

ಚಂದಗುಳಿಯಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮ 28ರಿಂದ

ಬಸವರಾಜ ವೀರಪ್ಪ ಗರಗ

ಯಲ್ಲಾಪುರ: ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಅಷ್ಟಬಂಧ ಮಹೋತ್ಸವ, ಶಿಖರ ಪ್ರತಿಷ್ಠೆ, ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಫೆ. 28ರಿಂದ ಮಾ. 3 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಹೇಳಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ. 28 ಹಾಗೂ ಮಾ. 1ರಂದು ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. ಮಾ. 2ರಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳಿಂದ ಅಷ್ಟಬಂಧ, ಪುನರ್ ಪ್ರತಿಷ್ಠೆ, ಧ್ವಜಸ್ಥಾಪನೆ, ಶಿಖರ ಪ್ರತಿಷ್ಠೆ ನೆರವೇರಲಿದೆ. ಮಾ. 3ರಂದು ಪ್ರತಿಷ್ಠಾ ಉತ್ತರಾಂಗ ಹವನದೊಂದಿಗೆ ಧಾರ್ವಿುಕ ಕಾರ್ಯಗಳು ಸಂಪನ್ನಗೊಳ್ಳಲಿವೆ. ನೂತನ ದೇವಾಲಯ, ಯಾಗಶಾಲೆ ಹಾಗೂ ಗುರುಭವನ ಲೋಕಾರ್ಪಣೆಗೊಳ್ಳಲಿದೆ ಎಂದು ವಿವರಿಸಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ನಡೆಯಲಿವೆ. ವಿ.ಹಿರಣ್ಯ ವೆಂಕಟೇಶ ಭಟ್ಟ ಅವರ ಪ್ರವಚನ, ಡಾ.ಪ್ರಭಾಕರ ಜೋಶಿ ತಂಡದಿಂದ ತಾಳಮದ್ದಲೆ, ಹಲಸಖಂಡ ಹಾಗೂ ಬಳಗಾರ ಮಾತೃ ಮಂಡಳಿಯವರಿಂದ ಭಜನೆ, ನಾರಾಯಣ ದಾಸ ಅವರ ಕೀರ್ತನೆ, ಖ್ಯಾತ ಕಲಾವಿದರಿಂದ ಭಕ್ತಿ ಸಂಗೀತ, ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಶ್ರೀಗಳು, ಶಿರಸಳಗಿಯ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಸೇರಿ ಅನೇಕ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಸ್ವಾಗತ ಸಮಿತಿ ಉಪಾಧ್ಯಕ್ಷ ಡಿ.ಶಂಕರ ಭಟ್ಟ, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಎಲ್.ಪಿ. ಭಟ್ಟ ಗುಂಡ್ಕಲ್, ನರಸಿಂಹ ಭಟ್ಟ ಗುಂಡ್ಕಲ್, ಆರ್.ಎಸ್. ಭಟ್ಟ, ಪ್ರಚಾರ ಸಮಿತಿ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ಇತರರಿದ್ದರು.