ಚಿಕ್ಕಬಳ್ಳಾಪುರ: ಮಹಾಲಯ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳ ಆಚರಣೆಯ ದಿನಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಸ್ಮಶಾನಗಳನ್ನು ಕಾಡುತ್ತಿರುವ ಮೂಲ ಸೌಕರ್ಯಗಳ ಕೊರತೆ, ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯ ಆಡಳಿತ ಸಂಸ್ಥೆಗಳು ಕಾರ್ಯೋನ್ಮುಖವಾಗಿದೆ.
ಸಮಾಧಿಗಳನ್ನು ಮರೆಮಾಚುವ ರೀತಿಯಲ್ಲಿ ಎಲ್ಲೆಂದರಲ್ಲಿ ಬೆಳೆದಿರುವ ಗಿಡಗಳು, ಅಲ್ಲಲ್ಲಿ ತುಂಬಿ ತುಳುಕಾಡುವ ತ್ಯಾಜ್ಯ, ಹದಗೆಟ್ಟಿರುವ ರಸ್ತೆ ಮಾರ್ಗ, ಅಕ್ರಮ ಒತ್ತುವರಿ, ಅಂತ್ಯಸಂಸ್ಕಾರ ನೆರವೇರಿಸಲು ಮೂಲ ಸೌಕರ್ಯಗಳ ಕೊರತೆ ಸೇರಿದಂತೆ ನಾನಾ ಸಮಸ್ಯೆಗಳು ಕಾಡುತ್ತಿವೆ. ಇನ್ನೂ ಪ್ರತಿ ವರ್ಷ ಸ್ಮಶಾನಗಳ ಅಭಿವೃದ್ಧಿಗೆ ಸ್ಥಳೀಯ ಆಡಳಿತ ಸಂಸ್ಥೆಗಳು ಸಾಕಷ್ಟು ಅನುದಾನ ಮೀಸಲಿಡುತ್ತಿದ್ದರೂ ಜನರ ಪರದಾಟ ಮಾತ್ರ ತಪ್ಪಿಲ್ಲ. ಅಂತ್ಯಸಂಸ್ಕಾರದ ನೋವಿನ ನಡುವೆ ಸಮಸ್ಯೆಗಳಿಗೆ ಹೈರಾಣರಾಗುವಂತಾಗಿದೆ.
*ಸಮಸ್ಯೆಗಳಿಗೆ ಹೈರಾಣ
ಸ್ಮಶಾನಗಳ ಅಕ್ರಮ ಒತ್ತುವರಿ ಸಮಸ್ಯೆಯಿಂದ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲು ಸಾಧ್ಯವಾಗದೇ ಮೃತರ ಸಂಬಂಧಿಕರು ಮೃತದೇಹದೊಂದಿಗೆ ಪ್ರತಿಭಟಿಸಿದ ಘಟನೆಗಳು ನಿರಂತರವಾಗಿ ವರದಿಯಾಗುತ್ತಿವೆ. ಗ್ರಾಮೀಣ ಭಾಗದಲ್ಲಿನ ಸ್ಮಶಾನಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನವಿಗಳ ಮಹಾಪೂರ ಅರ್ಜಿ ಸಲ್ಲಿಕೆಯಾಗುತ್ತಿವೆ. ಆದರೆ, ಇದಕ್ಕೆ ನಿರೀಕ್ಷೆಗೆ ಅನುಗುಣವಾಗಿ ಸಮಸ್ಯೆಗಳು ಮಾತ್ರ ಪರಿಹಾರ ಕಾಣುತ್ತಿಲ್ಲ.
*ಉದ್ಘಾಟನೆ ಭಾಗ್ಯವಿಲ್ಲ
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿನ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ನಗರಸಭೆಯ ವತಿಯಿಂದ ಸುಸ್ಜಜಿತ ವಿದ್ಯುತ್ ಚಿತಗಾರವನ್ನು ನಿರ್ಮಿಸಲಾಗಿದೆ. ಇದರ ಕಾಮಗಾರಿ ಮುಗಿದು, ಮೂರ್ನಾಲ್ಕು ವರ್ಷ ಕಳೆದರೂ ಇದುವರೆಗೂ ಉದ್ಘಾಟನೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಇದು ಪಾಳು ಬಿದ್ದು ಹಾಳಾಗುತ್ತಿದೆ. ದೂರುಗಳು ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರೂ ಸಹ ನೀಡಿದ ಭರವಸೆಯ ಈಡೇರಿಕೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
*ಅಮಾವಾಸ್ಯೆ ಪೂಜೆ
ಪ್ರತಿ ವರ್ಷ ಪಿತೃಪಕ್ಷಗಳ ವಿಶೇಷ ದಿನಗಳ ಸಂದರ್ಭದಲ್ಲಿ ಅನೇಕರು ಕುಟುಂಬದಲ್ಲಿ ಮೃತಪಟ್ಟವರ ಸಮಾಧಿಗಳಿಗೆ ಎಡೆ ಹಾಕಿ, ತರ್ಪಣ ನೀಡುವುದು ಹಾಗೂ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ವಾಡಿಕೆ. ಮಹಾಲಯ ಅಮಾವಾಸ್ಯೆ ದಿನದಂದು ಈ ಆಚರಣೆಗಳು ಹೆಚ್ಚಿಗೆ ನಡೆಯುತ್ತವೆ. ಇದರ ನಡುವೆ ಸ್ಮಶಾನಗಳಲ್ಲಿನ ತ್ಯಾಜ್ಯ, ಎಲ್ಲೆಂದರಲ್ಲಿ ಬೆಳೆದಿರುವ ಗಿಡಗಳ ತೆರವು, ಸ್ವಚ್ಛತಾ ಕಾರ್ಯ, ನೀರಿನ ಪೈಪ್ ಲೈನ್ ಹಾಗೂ ದೀಪಗಳ ದುರಸ್ತಿ ಸೇರಿದಂತೆ ಅಗತ್ಯ ಕಾರ್ಯಗಳನ್ನು ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
*ಯಲುವಹಳ್ಳಿಯಲ್ಲಿ ಶ್ರಮದಾನ
ಮಹಾಲಯ ಅಮಾವಾಸ್ಯೆ ದಿನದ ಹಿನ್ನೆಲೆಯಲ್ಲಿ ತಾಲೂಕಿನ ಯಲುವಹಳ್ಳಿಯ ಸ್ಮಶಾನದಲ್ಲಿ ಸ್ಥಳೀಯ ಯುವ ಪಡೆಯಿಂದ ಸ್ವಚ್ಛತಾ ಕಾರ್ಯ ನಡೆಯಿತು.
ಸ್ಮಶಾನದಲ್ಲಿ ಬೆಳೆದಿದ್ದ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ, ಸ್ವಚ್ಛತಾ ಕಾರ್ಯದ ಶ್ರಮದಾನವನ್ನು ಕೈಗೊಳ್ಲಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಆರ್.ಮಂಜುನಾಥ್, ಮುನೇಗೌಡ, ಶ್ರೀರಾಮ್, ನಂಜೇಗೌಡ ಮಂಜುನಾಥ್ ಮತ್ತಿತರರು ಇದ್ದರು.