ಚಿಕ್ಕಬಳ್ಳಾಪುರ: ಲಾಭದಾಯಕ ಗಂಧದ ಕೃಷಿಗೆ ನಿರಂತರ ಮರಗಳ ಕಳ್ಳತನವು ತೊಡಕಾಗುತ್ತಿರುವುದರ ಬಗೆಗಿನ ರೈತರ ಅಳಲಿನ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 750 ಎಕರೆ ಜಾಗದಲ್ಲಿ ಶ್ರೀಗಂಧ ವನ ಕೃಷಿಯನ್ನು ಕೈಗೊಳ್ಳುತ್ತಿದ್ದು 3 ಲಕ್ಷಕ್ಕೂ ಹೆಚ್ಚು ಮರಗಳನ್ನು ಬೆಳೆಸಲಾಗಿದೆ. ಇದರ ನಡುವೆ ಒಂದೆಡೆ ಹಂದಿ, ಜಿಂಕೆ, ಕೋತಿ ಹಾಗೂ ನವಿಲುಗಳ ಕಾಟ ಒಂದೆಡೆ ಕಾಡುತ್ತಿದ್ದರೆ, ಮತ್ತೊಂದೆಡೆ ಶ್ರೀಗಂಧದ ಕಳ್ಳರ ಕಾಟದ ಭೀತಿ ಇದೆ. ರೈತರು ಬಹಳ ಕಷ್ಟಪಟ್ಟು ಬೆಳೆಸಿದ ಗಂಧದ ಮರಗಳನ್ನು ಕಳ್ಳರು ರಾತ್ರೋರಾತ್ರಿ ಕತ್ತರಿಸಿಕೊಂಡು ಹೋಗುತ್ತಿದ್ದು ಲಾಭದ ನಿರೀಕ್ಷೆಯಲ್ಲಿದ್ದವರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ಇದರ ಬಗ್ಗೆ ರೈತರು ಅಳಲು ತೋಡಿಕೊಳ್ಳುತ್ತಿದ್ದು ಇದರ ಬಗ್ಗೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಕೈಗೊಂಡಿದ್ದ ಶ್ರೀಗಂಧ ಮರಗಳ ಸಂರಕ್ಷಣೆಯ ಸಭೆಯಲ್ಲಿ ಚರ್ಚಿಸಲಾಯಿತು.
ನಿರಂತರವಾಗಿ ಶ್ರೀಗಂಧ ಮರದ ಕಳ್ಳತನ ಪ್ರಕರಣಗಳು ವರದಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಕಳವು ಕೃತ್ಯಗಳಲ್ಲಿ ಭಾಗಿಯಾಗಿರುವುವರನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.
ಯಾವುದೇ ವಯಸ್ಸಿನ ಶ್ರೀಗಂಧದ ಮರದ ಕೊಂಬೆಯನ್ನು ಕತ್ತರಿಸುವುದು, ಕೊಯ್ದು ಸಾಗಿಸುವುದು ಹಾಗೂ ಕಳ್ಳತನ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್ .ರವೀಂದ್ರ ತಿಳಿಸಿದ್ದಾರೆ.
ಕೃಷಿ ಜಮೀನಿನಲ್ಲಿ ಖಾಸಗಿಯಾಗಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕತ್ತರಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ರೈತರು ವಲಯ ಅರಣ್ಯ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಬೇಕು. ಅನುಮತಿ ಪಡೆದ ಬಳಿಕ ಶ್ರೀಗಂಧವನ್ನು ನಿರ್ದಿಷ್ಟ ಉದ್ದಿಮೆಯ ಸಂಸ್ಥೆಗೆ ಮಾರಬಹುದು. ಬಹುಮುಖ್ಯವಾಗಿ ಸೂಕ್ತ ದಾಖಲೆಗಳನ್ನು ಹೊಂದಿರಬೇಕು ಎಂದು ಸೂಚಿಸಿದ್ದಾರೆ.
ಕಾನೂನು ನಿಯಮಗಳನ್ನು ಬಿಟ್ಟು ಅಕ್ರಮ ಗಂಧದ ಮರ ಸಾಗಾಣೆ ಹಾಗೂ ಮಾರಾಟ ಚಟುವಟಿಕೆಯಲ್ಲಿ ಭಾಗಿಯಾದಲ್ಲಿ ನಿರ್ದಾಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಕಳ್ಳರಿಗೆ ಸಹಕಾರ ನೀಡಿದವರು ಸಹ ಹೊಣೆ ಹೊರಬೇಕಾಗುತ್ತದೆ. ಎರಡು ಬಾರಿ ಕಳ್ಳತನಕ್ಕೆ ಶಿಕ್ಷೆ ಪ್ರಮಾಣ ದ್ವಿಗುಣ ಇರುತ್ತದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಉಪ ಪೊಲೀಸ್ ಅಧೀಕ್ಷಕ ಶಿವಕುಮಾರ ಮತ್ತಿತರರು ಇದ್ದರು.
*ನಿರೀಕ್ಷೆಯ ಸವಲತ್ತುಗಳ ಚರ್ಚೆ
ನಿರಂತರವಾಗಿ ಕಾಡುತ್ತಿರುವ ಸಮಸ್ಯೆಗಳು, ಸರ್ಕಾರದಿಂದ ನಿರೀಕ್ಷೆಯ ಪರಿಹಾರ ಹಾಗೂ ಸವಲತ್ತುಗಳು ಬಗ್ಗೆ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದಿಂದ ಗಮನ ಸೆಳೆಯಲಾಯಿತು.
ಕಾಡ್ಗಿಚ್ಚು, ಬೆಂಕಿ, ನೆರೆ ಪ್ರವಾಹದಿಂದ ರೈತರು ಬೆಳೆದ ಶ್ರೀಗಂಧದ ಮರಗಳು ನಾಶವಾದಾಗ ಸಂಕಷ್ಟದಿಂದ ಪಾರಾಗಲು ಸರ್ಕಾರದ ನೆರವು ಅಗತ್ಯ. ನಷ್ಟಕ್ಕೆ ಅನುಗುಣವಾಗಿ ಸಹಾಯಧನ, ಬೆಳೆಹಾನಿ ಪರಿಹಾರವನ್ನು ಒದಗಿಸಬೇಕು. ಖಾಸಗಿ ಜಮೀನುಗಳಲ್ಲಿ ಶ್ರೀಗಂಧದ ಮರಗಳನ್ನು ಬೆಳೆಯಲು ರೈತರನ್ನು ಹೆಚ್ಚಿಗೆ ಪ್ರೋತ್ಸಾಹಿಸಬೇಕು. ಇದಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಕೃಷಿಜ್ಞಾನ, ಆರ್ಥಿಕ ಸಬಲೀಕರಣ, ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಸೂಕ್ತ ಮಾರ್ಗದರ್ಶನಕಾರಿ ತರಬೇತಿ ನೀಡಬೇಕು ಎಂದು ಸಂದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಶ್ರೀಗಂಧದ ಕೃಷಿಯ ಜಮೀನಿಗೆ ಬೇಲಿ ನಿರ್ಮಿಸಿಕೊಳ್ಳಲು ತೋಟಗಾರಿಕೆ ಇಲಾಖೆಯಿಂದ ಸಹಾಯಧನ, ಗಂಧದ ಬೀಡು ಎಂಬ ಖ್ಯಾತಿಯಾಗಿರುವ ಕರ್ನಾಟಕದಲ್ಲಿ ಗಂಧದ ಕೃಷಿ ಉತ್ತೇಜನಕಾರಿ ಅಂಶಗಳು, ಜೀವಂತ ಹಾಗೂ ಜ್ವಲಂತ ಸಮಸ್ಯೆಗಳನ್ನು ಪರಿಹಾರದ ಬಗ್ಗೆ ಚರ್ಚಿಸಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ನಿರ್ಧರಿಸಲಾಯಿತು.