ಮಸ್ಕಿ: ಪಟ್ಟಣದ ಹೊರವಲಯದಲ್ಲಿ ಕಸ ವಿಲೇವಾರಿ ಘಟಕ ಆರಂಭಿಸಬೇಕು. ಸೋಮನಾಥ ನಗರದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಅರಮನೆ ಸುಧಾಗೆ ದಲಿತ ಸಂಘರ್ಷ ಸಮಿತಿ ಸದಸ್ಯರು ಸೋಮವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಕಿದ್ವಾಯಿ ಅಕ್ರಮದ ತನಿಖೆ ಮುಖ್ಯಮಂತ್ರಿ ಆದೇಶ
ತಾಲೂಕು ಅಧ್ಯಕ್ಷ ಖಾಸಿಂ ಮುರಾರಿ ಮಾತನಾಡಿ, ಪುನರ್ವಸತಿ ಗ್ರಾಮ ಮರಕಮದಿನ್ನಿಯಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ಗ್ರಾಮಸಭೆ ಮೂಲಕ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ಸ್ಮಶಾನಕ್ಕಾಗಿ ಕಾಯ್ದಿರಿಸಿದ 1.20 ಎಕರೆ ಜಮೀನನ್ನು ಹದ್ದುಬಸ್ತು ಮಾಡಬೇಕು.
ಸುಂಕನೂರು ಗ್ರಾಮದ ಸರ್ವೇ ನಂ. 51 ರಲ್ಲಿ 40 ವರ್ಷಗಳಿಂದ ವಾಸವಿರುವ 30 ದಲಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ವಿವಿಧ ಇಲಾಖೆಗಳಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ ದುರ್ಬಳಕೆ ಆಗುವುದನ್ನು ತಡೆಯಬೇಕು. ಅಮಿನಗಡ, ಉದ್ಬಾಳ(ಯು), ಗೌಡನಬಾವಿ ಗ್ರಾಪಂನಲ್ಲಿ 14 ಮತ್ತು 15ನೇ ಹಣಕಾಸು ಯೋಜನೆ, ಸ್ವಚ್ಛ ಭಾರತ ಮಿಷನ್, ವಸತಿ ಯೋಜನೆ, ಜೆಜೆಎಂ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಅವ್ಯವಹಾರವಾಗಿದ್ದು, ಸಮಗ್ರ ತನಿಖೆ ನಡೆಸಬೇಕು.
ಮಾನ್ವಿ ತಾಲೂಕು ಮದ್ಲಾಪುರ ಗ್ರಾಮದಲ್ಲಿ ದಲಿತ ಮಖಂಡನನ್ನು ಕೊಲೆ ಮಾಡಿದವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ಪ್ರಮುಖರಾದ ಅಮರನಾಥ ಉದ್ಬಾಳ, ಈರಣ್ಣ ಕಳಕೇರಿ, ಗೋಪಾಲಪ್ಪ ಪೂಜಾರಿ ಮೆದಕಿನಾಳ, ರಮೇಶ ಬೆಳ್ಳಿಗನೂರು ಇದ್ದರು.