ಹುಕ್ಕೇರಿ: ಸೋಯಾಬೀನ್ ಖರೀದಿ ಕೇಂದ್ರ ತೆರೆಯುವುದು, ಡೊಣ್ಣೆ ಹುಳುವಿನ ಕೀಟ ಬಾಧೆ ಪರಿಹಾರ, ಕೃಷಿಯಲ್ಲಿ ನರೇಗಾ ಯೋಜನೆ ಅಳವಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೃಷಿಕ ಸಮಾಜ ತಾಲೂಕು ಘಟಕದಿಂದ ತಹಸೀಲ್ದಾರ್ ಮಂಜುಳಾ ನಾಯಕ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ. ಮಗೆಣ್ಣವರ, ಎಪಿಎಂಸಿ ನಿರ್ದೇಶಕ ಭೀಮಸೇನ ಭಾಗಿ ಮಾತನಾಡಿ, ಕೇಂದ್ರ ಸರ್ಕಾರ ಘೋಷಿಸಿರುವ ಸೋಯಾಬೀನ್ ಬೆಂಬಲ ಬೆಲೆಯಡಿ ತಾಲೂಕಿನ ಎಪಿಎಂಸಿಯಿಂದ ಸಂಕೇಶ್ವರ, ಹುಕ್ಕೇರಿ ಮತ್ತು ಯಮಕನಮರಡಿಯಲ್ಲಿ ಖರೀದಿ ಕೇಂದ್ರ ತಕ್ಷಣ ಪ್ರಾರಂಭಿಸಬೇಕು. ಡೊಣ್ಣೆ ಹುಳುವಿನ ಕಾಟದಿಂದ ಕಬ್ಬು ನಾಶವಾಗಿದ್ದು, ಬೆಳೆ ಹಾನಿ ಸಮೀಕ್ಷೆ ಮಾಡಿಸಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಕೃಷಿಗೆ ನರೇಗಾ ಯೋಜನೆ ಅಳವಡಿಸಿದರೆ ರೈತರಿಗೆ ಸಹಕಾರಿಯಾಗುತ್ತದೆ ಎಂದು ಒತ್ತಾಯಿಸಿದರು.
ಕೃಷಿಕ ಸಮಾಜ ಸಮಿತಿ ಸದಸ್ಯರಾದ ಕೆಂಪಣ್ಣ ವಾಸೇದಾರ, ಜಿನಗೌಡ ಇಮಗೌನವರ, ಸಂಜು ಕಂಠಿ, ಅಪ್ಪಣ್ಣ ಬಡಿಗೇರ, ನಾರಾಯಣ ರಜಪೂತ, ಸುಧಾಮ ಮಾಳಗೆ, ರವಿ ಬೋರಗಲ್ಲ, ಮಹೇಶ ಕುಪಾಟಿ, ನಿತಿನ ಪಾಟೀಲ, ಪರಗೌಡ ಪಾಟೀಲ, ಇಮ್ರಾನ್ ಮುಲ್ಲಾ, ಜಯಪಾಲ ಮಲಗೌಡನವರ, ಮಾರುತಿ ಮರೆಣ್ಣವರ ಇತರರು ಇದ್ದರು.