ವಿರಾಜಪೇಟೆ: ಕೊಡಗು ಜಿಲ್ಲೆಯ ಪ್ರಾಕೃತಿಕ ಸೌಂದರ್ಯವನ್ನು ಛಾಯಾಚಿತ್ರಗಳ ಮೂಲಕ ಪ್ರಸಾರಪಡಿಸುವ ಮತ್ತು ಕೊಡಗು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉತ್ಸಾಹಿ ಛಾಯಾಗ್ರಾಹಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆ ಮತ್ತು ವಿರಾಜಪೇಟೆ ಸಾದಿಕ್ ಆರ್ಟ್ಸ್ ಲಿಂಕ್ ಸಹಯೋಗದಲ್ಲಿ ಕೊಡಗು ಕಲಾ ಉತ್ಸವದ ಅಂಗವಾಗಿ ಪ್ರಕೃತಿ ಸೌಂದರ್ಯ ಮತ್ತು ಪುರಾತನ ಕಟ್ಟಡಗಳ ಬಗ್ಗೆ ಛಾಯಾಚಿತ್ರ ಸ್ಪರ್ಧೆ ನಡೆಯಲಿದೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಾದಿಕ್ ಆರ್ಟ್ಸ್ ಲಿಂಕ್ ಸಂಚಾಲಕ ಸಾದಿಕ್ ಹಂಸ, ಛಾಯಾಚಿತ್ರ ಸ್ಪರ್ಧೆ ಎರಡು ವಿಭಾಗದಲ್ಲಿರುತ್ತದೆ. ಕೊಡಗು ಜಿಲ್ಲೆಯ ಪ್ರಕೃತಿ ಸೌಂದರ್ಯ ಮತ್ತು ಪುರಾತನ ಕಟ್ಟಡಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಕಳುಹಿಸಬೇಕು. ಛಾಯಾಗ್ರಾಹಕರು ಮತ್ತು ಹವ್ಯಾಸಿ ಛಾಯಾಗ್ರಾಹಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯು ಮುಕ್ತವಾಗಿದ್ದು, ಎಲ್ಲ ವರ್ಗದ ವ್ಯಕ್ತಿಗಳು ಭಾಗವಹಿಸಬಹುದು.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಛಾಯಾಚಿತ್ರಗಳನ್ನು ವಾಟ್ಸ್‌ಆ್ಯಪ್ ಸಂಖ್ಯೆ 9845820257ಗೆ ಅ.25ರ ಒಳಗೆ ಕಳುಹಿಸಬೇಕು. ಭಾಗವಹಿಸುವವರು ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ನಮೂದಿಸುವುದು ಕಡ್ಡಾಯವಾಗಿದೆ.