ಜಿಲ್ಲೆ

ಸಂಕಷ್ಟದಲ್ಲಿರುವ ಜನರಿಗೆ ನೆರವಾಗೋಣ: ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು ಕರೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಕೆಲಸದಲ್ಲಿಯೇ ಯಾರೂ ಕಳೆದು ಹೋಗಬಾರದು. ಏಕೆಂದರೆ ಕರ್ತವ್ಯವೇ ಮುಖ್ಯ ಎನ್ನುವುದರ ಜತೆಗೆ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮೂಲಕ ಅವರ ನೆರವಿಗೆ ಧಾವಿಸುವುದು ಮುಖ್ಯವಾಗಬೇಕು. ಹೀಗಿದ್ದಾಗ ಮಾತ್ರ ಕೆಲಸ ನಿರ್ವಹಿಸುವ ಇಲಾಖೆಗೆ ಗೌರವ ತಂದುಕೊಟ್ಟಂತಾಗುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು ಅಭಿಪ್ರಾಯಪಟ್ಟರು.

ನಗರದ ಕೆವಿಎಸ್ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಸಿ.ಗೌರಮ್ಮ ಚಿಕ್ಕಣ್ಣ ಸಮಾಜ ಸೇವಾ ಪ್ರಶಸ್ತಿ, ಸಿ.ಸುವರ್ಣಾ ಎಂ.ಪುಟ್ಟಸ್ವಾಮಿ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸಿರಿವಂತರು ಹಾಗೂ ಸರ್ಕಾರಿ ನೌಕರರಿಗೆ ಸಮಾಜದಲ್ಲಿ ಸೇವೆ ಮಾಡುವ ಮನೋಭಾವ ಇದ್ದರೆ ತಾನಾಗಿಯೇ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಜತೆಗೆ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ನೆರವಾಗುವ ಗುಣ ಬೆಳೆಸಿಕೊಳ್ಳೋಣ ಎಂದು ಮನವಿ ಮಾಡಿದರು.

ಸಹ ಪ್ರಾಧ್ಯಾಪಕ ಎಸ್.ಶಿವರಾಮು ಮಾತನಾಡಿ, ಎರಡು ಪ್ರಮುಖ ಕ್ಷೇತ್ರಗಳಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಕೆಲಸ ಅನನ್ಯವಾಗಿದೆ. ಇಂತಹ ದತ್ತಿ ಪ್ರಶಸ್ತಿ ಪ್ರದಾನವು ಹೆಚ್ಚು ನಡೆದು ಮಹನೀಯರ ಹೆಸರನ್ನು ಚಿರಸ್ಥಾಯಿಗೊಳಿಸಲಿ ಎಂದರು.

ಗ್ರಾಮೀಣ ಭಾಗದಲ್ಲಿ ಮಾಸ್ತಿ ಕಲ್ಲುಗಳ ಹೆಸರಿನಲ್ಲಿ ಸಾಧಕರ ಚಿತ್ರಣವನ್ನು ನೋಡುತ್ತೇವೆ. ಸೇವೆಗೆಂದೇ ಪ್ರಾಣ ಬಿಟ್ಟವರು ಹಾಗೂ ಸಾಧಕರ ಮಾಸ್ತಿ ಕಲ್ಲುಗಳು, ವೀರಗಲ್ಲುಗಳ ಮೂಲಕ ಕೆತ್ತನೆ ಮಾಡಲಾಗಿರುತ್ತದೆ. ಇದರಲ್ಲಿ ಸೂರ್ಯ ಚಂದ್ರ ಇರುವ ತನಕ ಹೆಸರು ಉಳಿಯಲಿ ಎಂಬ ದೃಷ್ಟಿಯಿಂದ ಹಳ್ಳಿಗಾಡಿನ ಪ್ರದೇಶಗಳಲ್ಲಿ ಅವರ ಹೆಸರನ್ನು ಸ್ಮರಿಸಲಾಗುತ್ತದೆ. ಪ್ರಸ್ತುತ ಸಾಧನೆ ಮಾಡಿದವರ ಹೆಸರಿಗಿಂತ ಅವರು ಗಳಿಸಿರುವ ಹಣ, ಆಸ್ತಿ ಎಷ್ಟಿದೆ ಎಂಬುದನ್ನೇ ನೋಡಲಾಗುತ್ತದೆ. ಅದಕ್ಕೆ ವಿರುದ್ಧವಾಗಿರುವಂತಹ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಮೆಚ್ಚುವ ಕೆಲಸ ಹಾಗೂ ಇತರರಿಗೂ ಮಾದರಿ. ಸಿ.ಗೌರಮ್ಮಚಿಕ್ಕಣ್ಣ ಮತ್ತು ಸಿ.ಸುವರ್ಣಾ ಎಂ.ಪುಟ್ಟಸ್ವಾಮಿ ಹೆಸರಿನಲ್ಲಿ ಶೈಕ್ಷಣಿಕ ಮತ್ತು ಸಮಾಜಸೇವೆ ಪ್ರಶಸ್ತಿ ನೀಡುವ ಮೂಲಕ ಅವರ ಹಿರಿಮೆಯನ್ನು ಹೆಚ್ಚಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ವಕೀಲ ಬಿ.ಅಪ್ಪಾಜಿಗೌಡ ಅಧ್ಯಕ್ಷತೆ ವಹಿಸಿದ್ದರು. ಗೌಡಯ್ಯನದೊಡ್ಡಿ ಚಿಕ್ಕಣ್ಣ, ಸಹೋದರಾರದ ಸಿ.ಕೃಷ್ಣೇಗೌಡ, ವೈ.ಸಿ.ಚೌಡಯ್ಯ, ವೈ.ಸಿ.ಚನ್ನಪ್ಪ, ನಿವೃತ್ತ ಪ್ರಾಂಶುಪಾಲ ಎಂ.ಪುಟ್ಟಸ್ವಾಮಿ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಕಾರ್ಯದರ್ಶಿ ಚಂದಗಾಲು ಲೋಕೇಶ್, ತಗ್ಗಹಳ್ಳಿ ವೆಂಕಟೇಶ್ ಇದ್ದರು.

ಇದೇ ವೇಳೆ ಸಿ.ಗೌರಮ್ಮ ಚಿಕ್ಕಣ್ಣ ಸಮಾಜ ಸೇವಾ ಪ್ರಶಸ್ತಿಯನ್ನು ಪರಿಸರ ಪ್ರೇಮಿ ಬಿ.ಎಲ್.ಶಂಕರಪ್ಪ ಹಾಗೂ ಸಿ.ಸುವರ್ಣಾ ಎಂ.ಪುಟ್ಟಸ್ವಾಮಿ ಶೈಕ್ಷಣಿಕ ಪ್ರಶಸ್ತಿಯನ್ನು ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರಗೌಡ ಅವರಿಗೆ ಪ್ರದಾನ ಮಾಡಲಾಯಿತು.