ಮಂಡ್ಯ: ಗುರು ಹಿರಿಯರನ್ನು ಪೂಜಿಸುವ, ಆರಾಧಿಸುವ ಅವರ ಸೇವೆ ಮಾಡದಿದ್ದರೆ ಜೀವನದಲ್ಲಿ ಒಳ್ಳೆಯದಾಗುವುದಿಲ್ಲ. ಪ್ರೀತಿಯಿಂದ ನೋಡಿಕೊಳ್ಳದ ಮಕ್ಕಳು ಉದ್ಧಾರವಾಗುವುದಿಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿದ್ಯಾರ್ಥಿ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಇಂದು ಹಿರಿಯರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದನ್ನು ಎಲ್ಲರೂ ನೋಡುವಂತಾಗಿದೆ ಎಂದು ವಿಷಾದಿಸಿದರು.
ಯಾರೂ ನಿರೀಕ್ಷೆ ಮಾಡದ ಕೋವಿಡ್ ನಮ್ಮನ್ನು ಆವರಿಸಿದ ಸಂದರ್ಭದಲ್ಲಿ ಎಲ್ಲರೂ ಏನೆಲ್ಲ ಅನುಭವಿಸಿದ್ದರು ಎಂಬುದನ್ನು ವಿವರಿಸಿದ ಅವರು, ಕೋವಿಡ್ ಸೋಂಕಿಗೆ ಒಳಗಾದ ತಂದೆ-ತಾಯಿಯನ್ನು ನೋಡಿಕೊಳ್ಳಲಾಗದ ಪರಿಸ್ಥಿತಿ ನೋಡಿದ್ದೇವೆ. ಜತೆಗೆ ಸೋಂಕು ಇದ್ದು ಆರೋಗ್ಯವಾಗಿದ್ದರೂ ಅಂತಹ ಹಿರಿಯರನ್ನು ಮನೆಗೆ ಕರೆದೊಯ್ಯಲು ಹಿಂದೇಟು ಹಾಕಿದಂತಹ ವ್ಯವಸ್ಥೆಯನ್ನೂ ಕೇಳಿದ್ದೇನೆ. ನಾನು ನನ್ನ ತಾಯಿಯನ್ನು ಬಹು ಬೇಗನೆ ಕಳೆದುಕೊಳ್ಳಬೇಕಾಯಿತು. ಆ ವೇಳೆ ಚಿಕ್ಕಮ್ಮ ನಮ್ಮನ್ನು ಸಾಕಿ ಬೆಳೆಸಿದ್ದರು. ಅವರ ಸೇವೆ ಮಾಡಿದ್ದು ನನಗೆ ಸಮಾಧಾನ ತಂದಿದೆ. ಎಲ್ಲರೂ ಹಿರಿಯರ ಸೇವೆ ಮಾಡಬೇಕು. ಅವರು ಇನ್ನಷ್ಟು ದಿನ ಬದುಕುವಂತಹ ವಾತಾವರಣ ನಿರ್ಮಿಸಿಕೊಡಬೇಕು. ಇದರಿಂದ ಮನೆಯೂ ಆನಂದದಿಂದ ತುಂಬಿರುತ್ತದೆ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಕಾರ್ಯ ಶ್ಲಾಘನೀಯ. ಇನ್ನೂ ಬಹಳಷ್ಟು ಕೆಲಸ ಮಾಡುವ ತವಕದಲ್ಲಿದ್ದಾರೆ. ಈ ಹಿಂದೆ ಡಾ.ಬಾಲಗಂಗಾಧರನಾಥ ಸ್ವಾಮೀಜಿ ರೈತ ಸಭಾಂಗಣದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಜತೆಗೆ ಜಯಪ್ರಕಾಶಗೌಡರೂ ಸಹ ಈ ಬಗ್ಗೆ ಮನವಿ ಮಾಡಿದ್ದರು. ತಕ್ಷಣ ನಮ್ಮ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದೆವು. ಅದಕ್ಕೆ ಸ್ಪಂದಿಸಿ ತಕ್ಷಣ ಸಿಎಸ್‌ಆರ್ ನಿಧಿಯಲ್ಲಿ ಪುನಶ್ಚೇತನ ಮಾಡಲು ನಮಗೆ ಆದೇಶ ನೀಡಿದ್ದರು. ಅದರಂತೆ ನಾವು ರೈತ ಸಭಾಂಗಣದ 4.50 ಕೋಟಿ ರೂ ವೆಚ್ಚದಲ್ಲಿ ಪುನಶ್ಚೇತನಕ್ಕೆ ಮುಂದಾಗಿದ್ದೇವೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿದ್ದ ಜಯರಾಂ ರಾಯಪುರ ಅವರು ಆಂಧ್ರಪ್ರದೇಶದ ಐಟಿ ಇಲಾಖೆಯ ಮುಖ್ಯ ಆಯುಕ್ತರಾಗಿ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅವರನ್ನು ಕರೆಸಿ ನ.1ರಂದು ದೊಡ್ಡ ಮಟ್ಟದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಮಾತನಾಡಿ, ಕರ್ನಾಟಕ ಸಂಸ್ಕೃತಿ, ಸಂಸ್ಕಾರದ ಆಗರವಾಗಿದೆ. ಅನೇಕ ಹಿರಿಯರು ಇದಕ್ಕೆ ಸಹಕಾರ ನೀಡಿದ್ದಾರೆ. ಅವರನ್ನು ಗೌರವಿಸುವ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಸಮುದಾಯದ ಏಳಿಗೆಗಾಗಿ ಹಲವಾರು ಆರ್ಥಿಕ ಸಹಾಯವನ್ನು ನಿಗಮದ ಮೂಲಕ ಹಮ್ಮಿಕೊಳ್ಳಲಾಗಿದೆ. ಗಂಗಾ ಕಲ್ಯಾಣ ಯೋಜನೆ, ಡಿ.ದೇವರಾಜ ಅರಸು ಸ್ವಾವಲಂಬಿ ಯೋಜನೆಯಲ್ಲಿ ಸ್ವಯಂ ಉದ್ಯೋಗಕ್ಕೆ ಆರ್ಥಿಕ ಸಹಾಯ, ಸಂಚಾರ ಸಾರಥಿಯಲ್ಲಿ ಲಘು ವಾಹನಕ್ಕೆ 3 ಲಕ್ಷ ರೂ ಸಹಾಯಧನದಲ್ಲಿ ವಾಹನ ಕೊಡಿಸಲಾಗುವುದು. ಅರಿವು ಯೋಜನೆಯಲ್ಲಿ ಸಿಇಟಿ ಮೂಲಕ ವೈದ್ಯರು, ಇಂಜಿನಿಯರ್ ಅಥವಾ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರತಿ ವರ್ಷ ತಲಾ ಒಂದು ಲಕ್ಷ ರೂ ಸಾಲ, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ತೆರಳುವವರಿಗೆ 50 ಲಕ್ಷ ರೂವರೆಗೆ ಬಡ್ಡಿರಹಿತ ಸಾಲ, 10 ವರ್ಷದೊಳಗೆ ಮರುಪಾವತಿಗೆ ಅವಕಾಶ, ಕೌಶಲಾಭಿವೃದ್ಧಿ ಯೋಜನೆಯಡಿ ತರಬೇತಿ ಕೇಂದ್ರದಲ್ಲಿ ಅವಕಾಶ ಸೇರಿದಂತೆ ಹಲವು ಯೋಜನೆ ಸರ್ಕಾರ ರೂಪಿಸಿದ್ದು, ಎಲ್ಲರೂ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಕಷ್ಟದಲ್ಲಿರುವವರ ಜತೆಗೆ ನಿಲ್ಲಬೇಕು. ಸಮಾಜಮುಖಿಯಾಗಿ ಕೆಲಸ ಮಾಡುವುದಾದರೆ ಅದಕ್ಕೆ ಹೆಚ್ಚು ಬೆಲೆ ಇರುತ್ತದೆ ಎಂಬುದಕ್ಕೆ ಈ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರೇ ಸಾಕ್ಷಿಯಾಗಿದ್ದಾರೆ. ಎಳೆಯ ಪ್ರತಿಭೆಗಳಿಗೂ ಬೆನ್ನು ತಟ್ಟುವ ಕೆಲಸ ಮಾಡಬೇಕು. ಜೀವನದಲ್ಲಿ ಸಾಧನೆ ಮಾಡಿರುವವರನ್ನೂ ಗುರುತಿಸುವ ಕೆಲಸ ಮಾಡಿದರೆ ಅವರು ಮತ್ತಷ್ಟು ಸಾಧನೆ ಮಾಡಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್ ಇತರರಿದ್ದರು.
ಇದೇ ವೇಳೆ ಮದ್ದೂರಿನ ಎಂ.ಎಚ್.ಚನ್ನೇಗೌಡ ಶಿಕ್ಷಣ ಸಂಸ್ಥೆಗೆ ಶಿಕ್ಷಣ ಪ್ರಶಸ್ತಿ, ಕೆ.ರಾಜಶೇಖರಯ್ಯ ಅವರಿಗೆ ನಂಜಮ್ಮ ಸೇವಾ ಪ್ರಶಸ್ತಿ, ಎನ್.ಎಂ.ಶಿವಪ್ರಕಾಶ್ ಅವರಿಗೆ ಶಿಕ್ಷಕ ಪ್ರಶಸ್ತಿ, ಬಿಳೀಗೌಡ ಅವರಿಗೆ ಮೋಟೇಗೌಡ ಕೃಷಿ ಪ್ರಶಸ್ತಿಯನ್ನು ತಲಾ 15 ಸಾವಿರ ರೂ ಜತೆಗೆ ಪ್ರದಾನ ಮಾಡಲಾಯಿತು. ಅಂತೆಯೇ ಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್.ಬಿಂದುಶ್ರೀ ಹಾಗೂ ಎಚ್.ಎಲ್.ಪಲ್ಲವಿ, ಸಿ.ಹಂಸವೇಣಿ, ಸಿ.ಜೆ.ಚೈತ್ರಾ ಅವರಿಗೆ ಕೆ.ಎಲ್.ಅರುಣ್ ಸ್ಮರಣಾರ್ಥ ವಿದ್ಯಾರ್ಥಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.