ಮಂಡ್ಯ: ಸಂಕಷ್ಟದಲ್ಲಿರುವ ವಿಶ್ವವಿದ್ಯಾನಿಲಯಗಳನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಅಗತ್ಯ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವೈದ್ಯ ಹಾಗೂ ಸಾಹಿತಿ ಡಾ.ಚಂದ್ರಶೇಖರ್ ಒತ್ತಾಯಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತಿ ದೇಶಹಳ್ಳಿ ಮಾದಯ್ಯ ಸ್ಮರಣಾರ್ಥ 11ನೇ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಂಡ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಜಿಲ್ಲೆ. ಈ ನಿಟ್ಟಿನಲ್ಲಿ ಮಂಡ್ಯ ವಿವಿ ಉಳುಸಲು ಸರ್ಕಾರ ಮುಂದಾಗಲಿ ಎಂದು ಮನವಿ ಮಾಡಿದರು.
ಸಮ್ಮೇಳನಾಧ್ಯಕ್ಷ ಡಾ.ಎಚ್.ಎಂ.ನಾಗೇಶ್ ಮಾತನಾಡಿ, ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆ ತೆರೆಯಲು ಸರ್ಕಾರ ಅನುಮತಿ ಕೊಡಬಾರದು. ಅಗತ್ಯವೆನಿಸಿದರೆ ಮಾತ್ರ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಬೇಕು. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು. ಸಿ ಮತ್ತು ಡಿ ದರ್ಜೆ ಉದ್ಯೋಗಳಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಮೀಸಲಿಡಬೇಕು. ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರಗಳ ನಿರ್ವಹಣೆಗಾಗಿ ಕೇಂದ್ರ ಸರ್ಕಾರದಿಂದ ಅನುದಾನ ನೀಡಬೇಕು. ಸರ್ಕಾರಿ, ಖಾಸಗಿ ಕಚೇರಿ, ಕೈಗಾರಿಕೆ, ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್‌ಗೌಡ ಮಾತನಾಡಿ, ಆಧ್ಯಾತ್ಮಿಕ ವಿಚಾರದಲ್ಲಿ ಭಾರತ ಈ ಹಿಂದೆಯೇ ವಿಶ್ವಗುರು ಆಗಿತ್ತು. ಇದೀಗ ಅದೇ ದಾರಿಯಲ್ಲಿ ನಮ್ಮ ದೇಶ ಮತ್ತೊಮ್ಮೆ ಮುನ್ನುಗ್ಗಿದೆ. ಮಹಾಕುಂಭ ಮೇಳದಲ್ಲಿ 66 ಕೋಟಿ ಜನ ನೀರಿನಲ್ಲಿ ಮಿಂದೆದ್ದರು. ಇದು ದೇಶದ ಆಧ್ಯಾತ್ಮಿಕತೆಗೆ ಸಾಕ್ಷಿ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಿ.ಪಿ.ಸ್ವಾಮಿ, ಚಲನಚಿತ್ರ ನಿರ್ದೇಶಕ ಓಂಕಾರ್ ಪುರುಷೋತ್ತಮ್, ವೇದಿಕೆ ಅಧ್ಯಕ್ಷ ಕೃಷ್ಣ ಸ್ವರ್ಣಸಂದ್ರ, ಪದಾಧಿಕಾರಿಗಳಾದ ಮಂಗಲ ಶಿವಣ್ಣ, ಅರಸಯ್ಯ, ರೂಪಾ ಇತರರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.