ನಾಡದೇವತೆ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವದ ಅಂಗವಾಗಿ ಚಾಮುಂಡಿಬೆಟ್ಟದಲ್ಲಿ ಜು.10 ರಂದು ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿ ಮೆರವಣಿಗೆ ನಡೆಯಲಿದೆ.
ಆಷಾಢ ಮಾಸದ ಜರುಗುವ ವರ್ಧಂತಿ ಕಾರ್ಯಕ್ರಮದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾದೇವಿ ಒಡೆಯರ್ ದಂಪತಿ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮುಂಜಾನೆ 4 ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ. ಮೊದಲು ಅಮ್ಮನಿಗೆ ಅಭ್ಯಂಜನ ಸ್ನಾನ ಮಾಡಿಸಿ, ಬಳಿಕ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿದಂತೆ ವಿವಿಧ ಪೂಜೆಗಳು ನಡೆಯಲಿವೆ.
ಬೆಳಗ್ಗೆ 8 ಗಂಟೆಯಿಂದ ಭಕ್ತರಿಗೆ ಗಂಟೆಯ ನಂತರ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಪ್ರವೇಶ ಕಲ್ಪಿಸಲಾಗಿದ್ದು, ಭಕ್ತಾದಿಗಳಿಗೆ ಹೆಲಿಪ್ಯಾಡ್ ಹಾಗೂ ನಗರ ಬಸ್ ನಿಲ್ದಾಣದಿಂದ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.