ಯಡ್ರಾಮಿ: ವರವಿ ಗ್ರಾಮದಲ್ಲಿ ಶನಿವಾರ ಮುಂಗಾರು ಬಿತ್ತನೆಗಾಗಿ ಹೊಲಗಳಿಗೆ ತೆರಳಿದ್ದ ರೈತರು ಮಳೆ ಹೆಚ್ಚಾಗಿದ್ದರಿಂದ ಮನೆಗೆ ಹಿಂತಿರುವಾಗ ತುಂಬಿ ಹರಿಯುತ್ತಿದ್ದ ಹಳ್ಳವನ್ನು ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ದಡ ಸೇರಿದರು.
ತಾಲೂಕಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದರಿಂದ ಬಿತ್ತನೆ ಕಾರ್ಯ ಶುರುವಾಗಿದೆ. ಶನಿವಾರ ಬೆಳಗ್ಗೆ ಮಳೆರಾಯ ಬಿಡುವು ನೀಡಿದ್ದರಿಂದ ರೈತರು ಜಮೀನುಗಳಲ್ಲಿ ಬಿತ್ತನೆ ಮಾಡಲು ತೆರಳಿದ್ದರು. ಸಂಜೆ ಹೊತ್ತಿಗೆ ಮತ್ತೆ ಮಳೆ ಶುರುವಾಗಿದೆ. ಮನೆಗೆ ಮರಳುವ ವೇಳೆ ವರವಿ-ಕುಕನೂರ ಮಾರ್ಗದ ಹಳ್ಳ ತುಂಬಿ ಹರಿಯುತ್ತಿತ್ತು. ದಿಕ್ಕು ತೋಚದಂತಾದ ನೂರಾರು ರೈತರು ಹಾಗೂ ಮಹಿಳೆಯರು ಹಳ್ಳ ದಾಟಲು ಸುಮಾರು ಎರಡು ಗಂಟೆ ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ನಂತರ ಊರಿನಲ್ಲಿದ್ದ ರೈತರಿಗೆ ಕರೆ ಮಾಡಿ ಹಗ್ಗ ತರಿಸಿಕೊಂಡು ಅದರ ಸಹಾಯದಿಂದ ದನ-ಕರುಗಳನ್ನು ಸಾಗಿಸುವುದರ ಜತೆಗೆ ಜೀವ ಭಯದಲ್ಲೇ ಅವರೂ ದಡ ಸೇರಿದರು.
ವರವಿ ಗ್ರಾಮದ ನಾಲ್ಕೈದು ನೂರು ಎಕರೆ ಜಮೀನಿಗೆ ತೆರಳಲು ವರವಿ-ಕುಕನೂರ ಹಾಗೂ ವರವಿ-ಬೆಣ್ಣೂರ ರಸ್ತೆ ಆಸರೆಯಾಗಿದೆ. ಇವೆರಡು ರಸ್ತೆಗಳಿಗೆ ಅಡ್ಡಲಾಗಿ ಹಳ್ಳಗಳು ಹರಿಯುತ್ತವೆ. ಹೆಚ್ಚು ಮಳೆಯಾದರೆ ಹಳ್ಳ ದಾಟಲು ಹರಸಾಹಸ ಪಡಬೇಕಾದಂಥ ಸ್ಥಿತಿ ಇದೆ. ಈ ಕುರಿತು ಅನೇಕ ಸಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಿತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೈತರಾದ ಕೇಸು ಪ್ರಸಾದ್, ಬಾಬು ಸಾಹು ಮಳ್ಳಿ, ರೇವಣಸಿದ್ದ ಪೂಜಾರಿ, ಹಸನ್ ಸಾಬ್, ರಾಜು ಹೊಸಮನಿ, ರಾಜು ಪೂಜಾರಿ ಇತರರು ಒತ್ತಾಯಿಸಿದ್ದಾರೆ.
ಮಳೆ ಬಂದಾಗ ಜಮೀನುಗಳಿಗೆ ತೆರಳಲು ಹರಸಾಹಸ ಪಡುವಂತಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಾಲೂಕಿನ ಜನಪ್ರತಿನಿಧಿಗಳು ಎರಡೂ ಹಳ್ಳಗಳಿಗೆ ಸೇತುವೆ ನಿರ್ಮಿಸುವುದರ ಜತೆಗೆ ರಸ್ತೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು.
| ರಾಜು ಪೂಜಾರಿ ವರವಿ ಗ್ರಾಮಸ್ಥ
ಈ ಘಟನೆ ನನ್ನ ಗಮನಕ್ಕೆ ಬಂದಿಲ್ಲ. ರೈತರಿಂದ ಮಾಹಿತಿ ತೆಗೆದುಕೊಂಡು ಸ್ಥಳಕ್ಕೆ ಬೇಟಿ ನೀಡುತ್ತೇನೆ. ಸೇತುವೆ ನಿರ್ಮಾಣಕ್ಕೆ ಗ್ರಾಮ ಪಂಚಾಯತ ಮಟ್ಟದಲ್ಲಿ ಅನುಧಾನ ಇರುವುದಿಲ್ಲ. ಸಮಸ್ಯೆ ಗಮನಿಸಿ ಸಂಬಂದಪಟ್ಟ ಇಲಾಖೆಗೆ ಪತ್ರ ಬರೆಯುತ್ತೇನೆ.
| ಪ್ರಶಾಂತ ಪಿಡಿಒ, ಕರಕಿಹಳ್ಳಿ ಗ್ರಾಪಂ