ಬ್ರಹ್ಮಾವರ: ಕರೊನಾ ಲಾಕ್‌ಡೌನ್‌ನಿಂದ ಕಳೆದ ಎರಡು ತಿಂಗಳಿನಿಂದ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ ನಗರಗಳಲ್ಲಿ ನಿರಂತರ ಸ್ವಚ್ಛತಾ ಕಾರ್ಯದಲ್ಲಿ ಕರೊನಾ ಸೇನಾನಿಗಳಂತೆ ತೊಡಗಿಕೊಂಡಿದ್ದ ಬ್ರಹ್ಮಾವರ ಸ್ವಚ್ಛತಾ ಕರ್ಮಿಗಳಿಗೆ ವೇತನ ಸಿಗದೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಇದನ್ನು ಪ್ರತಿಭಟಿಸಿ ಇವರು ಕಳೆದ ಏಳು ದಿನಗಳಿಂದ ತ್ಯಾಜ್ಯ ಸಂಗ್ರಹ ಸ್ಥಗಿತಗೊಳಿಸಿದ್ದಾರೆ. ತ್ಯಾಜ್ಯ ನಿರ್ವಹಣೆಯಲ್ಲಿ ದೇಶದಲ್ಲೇ ಮಾದರಿಯಾದ ಬ್ರಹ್ಮಾವರ ವಾರಂಬಳ್ಳಿ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಆರಂಭಿಸಿದ ಘನ ಮತ್ತು ಒಣ ತ್ಯಾಜ್ಯ ಸಂಪನ್ಮೂಲ ಘಟಕದ ಸ್ವಚ್ಛತಾ ಕರ್ಮಿಗಳಿಗೆ ಕಳೆದ 2 ತಿಂಗಳಿಂದ ವೇತನ ಪಾವತಿಯಾಗಿಲ್ಲ.
ವಾರಂಬಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 850 ಮನೆ, 700 ಅಂಗಡಿ, 4 ಹೋಟೆಲ್, 4 ಬಾರ್ ಆಂಡ್ ರೆಸ್ಟೊರೆಂಟ್, 2 ಮದುವೆ ಹಾಲ್ ಗಳ ಘನ ಮತ್ತು ಒಣ ತ್ಯಾಜ್ಯವನ್ನು ವಾಹನದ ಮೂಲಕ ಇಲ್ಲಿನ ಘಟಕಕ್ಕೆ ತರುತ್ತಾರೆ. ಘಟಕದಲ್ಲಿ ವಾರಂಬಳ್ಳಿ ಸ್ವ ಸಹಾಯ ಸಂಘದ 14 ಮಹಿಳಾ ಸದಸ್ಯರು ತ್ಯಾಜ್ಯವನ್ನು ನೀರಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಬಳಿಕ 27 ವಿಧದಲ್ಲಿ ವಿಂಗಡಿಸಿ ಮಾರಾಟ ಮಾಡಿ ಬಂದ ಹಣ ಮತ್ತು ಪ್ರತೀ ಮನೆ, ಹೋಟೆಲ್‌ಗಳಿಂದ ನಿಗದಿಪಡಿಸಿದ ಹಣದಿಂದ ಸ್ವಚ್ಛತಾ ಕರ್ಮಿಗಳಿಗೆ ವೇತನ ಪಾವತಿಸಲಾಗುತ್ತಿತ್ತು. ಆದರೆ ಎರಡು ತಿಂಗಳಿಂದ ಹೋಟೆಲು, ಅಂಗಡಿ, ಬಾರ್, ಮದುವೆ ಹಾಲ್ ಸ್ಥಗಿತಗೊಂಡು ಹೊಡೆತ ಬಿದ್ದಿದೆ. ಈಗ ಲಾಕ್‌ಡೌನ್ ತೆರವಾದ ಬಳಿಕ ಹೋಗಿ ಕೇಳಿದರೆ ಹಣ ನೀಡಲು ಹಿಂದೇಟು ಹಾಕುತ್ತಾರೆ. ಅಲ್ಲದೆ ಘಟಕದಲ್ಲಿ ಸಂಗ್ರಹವಾದ ವಸ್ತುಗಳು ಮಾರಾಟವಾಗದೆ ವೇತನ ನೀಡಲು ಹಣವಿಲ್ಲದಾಗಿದೆ.
ಹೋಂ ಕ್ವಾರಂಟೈನ್ ತ್ಯಾಜ್ಯ ಸಂಗ್ರಹಕ್ಕೆ ಒತ್ತಡ: ನಾನಾ ರಾಜ್ಯದಿಂದ ಬಂದವರು ಬ್ರಹ್ಮಾವರದ ಕೆಲವು ಭಾಗದಲ್ಲಿ ಹೋಂ ಕ್ವಾರಂಟೈನ್‌ಗಳಿದ್ದು, ಅವರು ಬಳಸಿ ಎಸೆಯುವ ತ್ಯಾಜ್ಯಗಳನ್ನೂ ಸ್ವಚ್ಛತಾ ಕರ್ಮಿಗಳು ತರಬೇಕಾದ ಒತ್ತಡವಿದೆ. ಇದು ಘಟಕದ ಸದಸ್ಯರಲ್ಲಿ ಆತಂಕ ಸೃಷ್ಟಿಸಿದೆ. ಹಲವಾರು ಸಮಸ್ಯೆಗಳ ನಡುವೆ ಸಿಲುಕಿದ ಸ್ವಚ್ಛತಾ ಕರ್ಮಿಗಳ ಸಮಸ್ಯೆಗಳಿಗೆ ಸರ್ಕಾರ ಮತ್ತು ಆಡಳಿತ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ.
ಇದೊಂದು ಸಮಾಜ ಸೇವಾ ಕಾರ್ಯ ಎನ್ನುವ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಲಾಕ್‌ಡೌನ್ ಸಂದರ್ಭದಲ್ಲೂ ನಮ್ಮ ಸಿಬ್ಬಂದಿ ಕೆಲಸ ಮಾಡಿದ್ದಾರೆ. ಸಂಗ್ರಹವಾದ ವಸ್ತುಗಳು ಮಾರಾಟವಾಗದೆ ಹಣದ ಸಮಸ್ಯೆಯಾಗಿದೆ. ಕಳೆದ ಎರಡು ತಿಂಗಳಿನಿಂದ ವೇತನವಿಲ್ಲದೆ ಸಮಸ್ಯೆಯಾಗಿದೆ. ಆದ್ದರಿಂದ ಕಳೆದ ಏಳು ದಿನಗಳಿಂದ ತ್ಯಾಜ್ಯ ಸಂಗ್ರಹವನ್ನು ಸ್ಥಗಿತಗೊಳಿಸಲಾಗಿದೆ. -ಸುಮತಿ, ಮೇಲ್ವಿಚಾರಕಿ ಘನ ಮತ್ತು ಒಣ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಬ್ರಹ್ಮಾವರ ಗ್ರಾಮ ಪಂಚಾಯಿತಿ ವತಿಯಿಂದ ತ್ಯಾಜ್ಯ ನಿರ್ವಹಣೆಗೆ ಸ್ಥಳ ನೀಡಿದ್ದೇವೆ. ಈ ತನಕ ಪ್ರತೀ ತಿಂಗಳಲ್ಲಿ ಸಮಸ್ಯೆಯಾದಾಗ ಕೆಲವು ಬಾರಿ ಗ್ರಾಮ ಪಂಚಾಯಿತಿ ವತಿಯಿಂದ ಸಂಬಳಕ್ಕೆ ವ್ಯವಸ್ಥೆ ಮಾಡಿದ್ದೇವೆ. ಈಗ ಘಟಕದಲ್ಲಿರುವ ತ್ಯಾಜ್ಯ ಸಂಪನ್ಮೂಲವನ್ನು ಮಾರಾಟ ಮಾಡಿ ಸ್ವಚ್ಛತಾ ಕರ್ಮಿಗಳ ಸಂಬಳ ನೀಡಲಾಗುವುದು. -ನವೀನ್ ಚಂದ್ರ ನಾಯಕ್, ಅಧ್ಯಕ್ಷರು ವಾರಂಬಳ್ಳಿ ಗ್ರಾಮ ಪಂಚಾಯಿತಿ