ಹುಬ್ಬಳ್ಳಿ: ನಗರದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆಯನ್ನು ಸಡಗರ, ಸಂಭ್ರಮದಿಂದ ನೆರವೇರಿಸಲಾಯಿತು. ಎಲ್ಲೆಡೆ ವಿಜೃಂಭಣೆಯಿಂದ ಹಬ್ಬ ಆಚರಿಸಲಾಯಿತು.
ಮಹಿಳೆಯರು ತಮ್ಮ ಮನೆಗಳಲ್ಲಿ ಮಂಟಪ ರಚನೆ ಮಾಡಿ ಮಹಾಲಕ್ಷ್ಮಿ ಮೂತಿರ್ಯನ್ನು ಪ್ರತಿಷ್ಠಾಪಿಸಿ ದೇವಿಯ ಆರಾಧನೆ ಮಾಡಿದರು. ಅಲಂಕಾರಿಕ ಸಾಮಗ್ರಿ, ಬಾಳೆಕಂಬಗಳಿಂದ ಶೃಂಗರಿಸಿದ ಮಂಟಪದಲ್ಲಿ ವಿರಾಜಮಾನಳಾದ ಮಹಾಲಕ್ಷ್ಮೀಗೆ ಹಣ್ಣು, ಹಂಪಲು, ತರಹೇವಾರಿ ಭಕ್ಷ್ಯಗಳನ್ನು ನೈವೇದ್ಯ ಮಾಡಲಾಯಿತು.
ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ವರವ ಬೇಡಿದರು. ಬಂಧು ಬಾಂಧವರು, ನೆರೆಹೊರೆಯವರನ್ನು ಕರೆದು ಪೂಜೆಯ ಸಂಭ್ರಮ ಹೆಚ್ಚಿಸಿದರು. ಪೂಜೆಗೆ ಬಂದ ಮಹಿಳೆಯರಿಗೆ ಉಡಿ ತುಂಬುವುದು, ಉಡುಗೊರೆ ನೀಡುವುದು ಮುಂತಾದ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಸಾಮೂಹಿಕವಾಗಿ ಪ್ರಸಾದ ಸ್ವೀಕರಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳು ಒಂದಿಷ್ಟು ತುಟ್ಟಿಯಾಗಿದ್ದರೂ ಜನರು ಅದರ ಬಗ್ಗೆ ಯೋಚಿಸದೇ ವರಮಹಾಲಕ್ಷ್ಮೀ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸಿದರು.