ಕೋಲಾರ: ಕರೊನಾ ಆತಂಕವನ್ನೂ ಲೆಕ್ಕಿಸದೆ ವರಮಹಾಲಕ್ಷ್ಮೀ ಹಬ್ಬಕ್ಕೆ ನಗರದಾದ್ಯಂತ ಹೂವು, ಹಣ್ಣುಗಳ ಖರೀದಿ ಭರಾಟೆ ಬುಧವಾರದಿಂದಲೇ ಶುರುವಾಗಿದೆ.
ಶ್ರಾವಣ ಮಾಸ ಆರಂಭದೊಂದಿಗೆ ಸಾಲು ಸಾಲು ಹಬ್ಬಗಳು ಎದುರುಗೊಳ್ಳಲಾರಂಭಿಸಿವೆ. ಕಳೆದ ವಾರ ನಾಗರ ಪಂಚಮಿಯೊಂದಿಗೆ ಶುರುವಾದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತ ಹೆಣ್ಣು ಮಕ್ಕಳ ಪಾಲಿಗೆ ಅತ್ಯಂತ ಮಹತ್ವದ್ದು, ವ್ರತಾಚರಣೆ ಮಾಡುವುದರಿಂದ ಅಷ್ಟ ಐಶ್ವರ್ಯ ಸಿದ್ಧಿಸುತ್ತದೆ ಎಂಬ ನಂಬಿಕೆ ಭಕ್ತರದು. ಹೀಗಾಗಿ ಯುಗಾದಿ, ದೀಪಾವಳಿಗೂ ಕಡಿಮೆ ಇಲ್ಲದಂತೆ ವರ ಮಹಾಲಕ್ಷ್ಮೀ ವ್ರತ ಆಚರಿಸುತ್ತಾರೆ.
ರಂಗೇರಿದ ಮಾರುಕಟ್ಟೆ: ವ್ರತಾಚರಣೆಯೊಂದಿಗೆ ವರಮಹಾಲಕ್ಷ್ಮೀಯನ್ನು ಪೂಜಿಸಿ ಅನುಗ್ರಹಕ್ಕೆ ಪಾತ್ರರಾಗುವ ಸುದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ವಾರದ ಹಿಂದೆಯೇ ಮಹಾಲಕ್ಷ್ಮಿಯ ಅಲಂಕಾರಿಕ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಉಳ್ಳವರು ಸಾವಿರಾರು ರೂಪಾಯಿ ತೆತ್ತು ಮೂರ್ತಿ ಖರೀದಿಸಿದರೆ ಬಡವರು ಮನೆಯಲ್ಲೇ ಕಳಶಕ್ಕೆ ಲಕ್ಷ್ಮೀ ಮುಖವಾಡ ಇರಿಸಿ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ.
ಖರೀದಿ ಭರಾಟೆ ಜೋರು: ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಹೂವಿನ ಮಾರುಕಟ್ಟೆ, ರಂಗಮಂದಿರ ಮುಂಭಾಗ, ಎಂಜಿ ರಸ್ತೆ ಸೇರಿ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಹಣ್ಣಿನ ಅಂಗಡಿ, ತಳ್ಳುವ ಗಾಡಿ, ಸರಕು ಸಾಗಾಣಿಕೆ ವಾಹನಗಳಲ್ಲಿ ಹೂವು, ಹಣ್ಣು ಮಾರಾಟ ಆರಂಭವಾಗಿದ್ದು, ಹಬ್ಬದ ವಾತಾವರಣ ಮೂಡಿದೆ.
ದುಬಾರಿ ಬೆಲೆ: ಈ ಬಾರಿಯೂ ಹೂವು-ಹಣ್ಣುಗಳ ಬೆಲೆ ದುಬಾರಿಯೇ. ಚೆಂಡು ಹೂವು ಕೆಜಿಗೆ 100 ರೂ.ಗಳಾದರೆ ಮಲ್ಲಿಗೆ ಕೆಜಿಗೆ 480 ರೂ.ಗಳು, ಬಟನ್ ಗುಲಾಬಿ ಕೆಜಿಗೆ 280 ರೂ. ಸೇವಂತಿಗೆ 80ರಿಂದ 100 ರೂ.. ಅಲಂಕಾರಿಕ ಪುಷ್ಪಗಳಾದ ಗ್ಲಾಡಿಯೊಲಸ್ ಒಂದು ಕಟ್ಟಿಗೆ 80ರಿಂದ 100 ರೂ.ಗಳು, ವೆಲ್‌ವೆಟ್ 80 ರೂ.ಗಳಾದರೆ ಇತರ ಅಲಂಕಾರಿಕ ಹೂವು, ಗುಲಾಬಿ ದರ ಒಂದಕ್ಕೆ 10 ರೂ. ಆಗಿದೆ.
ದಾಳಿಂಬೆ ಕೆಜಿಗೆ 80ರಿಂದ 100 ರೂ., ಮೂಸಂಬಿ 60, ಸೇಬು 200ರಿಂದ 250 ರೂ. ಅನಾನಸ್ ಒಂದಕ್ಕೆ 30 ರೂ. ಏಲಕ್ಕಿ ಬಾಳೆ 80 ರೂ, ಪಚ್ಚೆಬಾಳೆ 25ರಿಂದ 30 ರೂಗಳು ಆಗಿದೆ.
ಕರೊನಾ ನಿರಾತಂಕ!: ಈ ವರ್ಷ ಕರೊನಾ ಎಲ್ಲ ಸಂಭ್ರಮವನ್ನೂ ಕಿತ್ತುಕೊಂಡಿದೆ. ಹಾಗಾಗಿ ಮನೆಯಲ್ಲೇ ಆಚರಿಸುವ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಇಮ್ಮಡಿಸಿದೆ. ಕೋಲಾರ ನಗರದಲ್ಲಿ ಕರೊನಾ ಆರ್ಭಟ ಜೋರಾಗಿದ್ದರೂ ಜನತೆ ಹಬ್ಬಕ್ಕೆ ಸಾಮಗ್ರಿ ಖರೀದಿಗೆ ಬಂದಿದ್ದರು.
ನಗರದ ಹಳೇ ಬಸ್ ನಿಲ್ದಾಣದಲ್ಲಿನ ಹೂವಿನ ಮಾರುಕಟ್ಟೆ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ಜನದಟ್ಟಣೆ ಸಂತೆಯಂತೆ ಕಂಡುಬಂತು. ಜನತೆ ಮಾಸ್ಕ್ ಧರಿಸಿದ್ದು ಬಿಟ್ಟರೆ ಕರೊನಾ ಮಾರ್ಗಸೂಚಿ ಪಾಲನೆ ಎಲ್ಲೂ ಕಾಣಲಿಲ್ಲ. ಕರೊನಾ ನಡುವೆಯೂ ವ್ಯಾಪಾರ ವಹಿವಾಟು ಸಾಗಿತ್ತು.
ಹಬ್ಬದ ಸಂದರ್ಭದಲ್ಲಿ ಉತ್ತಮ ವ್ಯಾಪಾರ ವಹಿವಾಟು ನಿರೀಕ್ಷೆಯಿದೆ. ಹೂವಿಗೆ ಬೇಡಿಕೆ ಹೆಚ್ಚಿದ್ದು, ಅವಕ ಕಡಿಮೆ ಇರುವುದರ ಜತೆಗೆ ಪ್ರತಿ ವರ್ಷದಂತೆ ಈ ಬಾರಿಯೂ ಬೆಲೆ ಇದೆ. ಚಂದ್ರಶೇಖರ್, ಹೂವಿನ ವ್ಯಾಪಾರಿ ಈ ವರ್ಷ ಕರೊನಾ ಕಾರಣದಿಂದ ಊರ ಜಾತ್ರೆಗೂ ಅಡ್ಡಿಯಾಗಿದೆ. ಶ್ರಾವಣ ಶನಿವಾರವೂ ದೇವರ ದರ್ಶನಕ್ಕೆ ಅವಕಾಶವಿಲ್ಲ. ಹಾಗಾಗಿ ಮನೆಯಲ್ಲೇ ಹಬ್ಬ ಆಚರಣೆಗೆ ಯಾವುದೇ ಅಡ್ಡಿಯಿಲ್ಲ. ಪೇಟೆಯಲ್ಲಿ ಜನಸಂದಣಿ ಜಾಸ್ತಿ ಇರುವುದರಿಂದ ಆತಂಕ ಇದೆ, ಆದರೂ ಪೂಜೆ ಸಾಮಗ್ರಿ, ಹಣ್ಣು, ಹೂವು ಖರೀದಿಸುವುದು ಅನಿವಾರ್ಯ. ಅಮರಾವತಿ, ಕೋಲಾರ ನಿವಾಸಿ