ಎನ್.ಆರ್.ಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ವರಮಹಾಲಕ್ಷ್ಮೀ ಪೂಜೆಯಲ್ಲಿ ವಲಯ ಮೇಲ್ವಿಚಾರಕ ಸಿದ್ದಲಿಂಗಪ್ಪ ಮಾತನಾಡಿದರು. ಮಧುರಾ, ಡಾ. ನಿಶಾಲ್, ಉಷಾ, ಜಯಲಕ್ಷ್ಮೀ ಇತರರಿದ್ದರು.  
ಜಿಲ್ಲೆ

ವರಮಹಾಲಕ್ಷ್ಮೀ ಪೂಜೆ ಸೌಭಾಗ್ಯದ ಸಂಕೇತ

ಎನ್.ಆರ್.ಪುರ: ವರಮಹಾಲಕ್ಷ್ಮೀ ಪೂಜೆ ಸೌಭಾಗ್ಯದ ಸಂಕೇತ ಎಂದು ಡಿಸಿಎಂಸಿ ಶಾಲೆ ಉಪನ್ಯಾಸಕಿ ಮಧುರಾ ಮಂಜುನಾಥ್ ತಿಳಿಸಿದರು.

ಪಟ್ಟಣದ ಮಹಾವೀರ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎನ್.ಆರ್.ಪುರ ವಲಯದ ಸಿಂಸೆ, ಎನ್.ಆರ್.ಪುರ ಹಾಗೂ ಬಸ್ತಿಮಠದ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ಮಹಿಳೆಯರಿಗೆ ಆರೋಗ್ಯ ತಪಾಸಣೆ ಹಾಗೂ ವರಮಹಾ ಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವರಮಹಾಲಕ್ಷ್ಮೀ ಪೂಜೆ ಆಡಂಭರದ ಪೂಜೆಯಾಗಬಾರದು. ಭಕ್ತಿಯಿಂದ ಪೂಜೆ ನೆರವೇರಿಸಿದರೆ ಲಕ್ಷ್ಮೀ ಒಲಿಯುತ್ತಾಳೆ ಎಂದರು.
ನಿವೃತ್ತ ಶಿಕ್ಷಕ ಕೆ.ಎಸ್.ರಾಜಕುಮಾರ್ ಮಾತನಾಡಿ, ಶ್ರಾವಣ ಮಾಸದಲ್ಲಿ ಈ ಹಿಂದೆ ಕೂಡು ಕುಟುಂಬ ಇತ್ತು. ಮನೆಗಳಲ್ಲಿ ಹಬ್ಬಗಳ ಆಚರಣೆಯಲ್ಲಿ ಎಲ್ಲರೂ ಭಾಗವಹಿಸಿ ಸಂಭ್ರಮಿಸುತ್ತಿದ್ದರು. ಮಕ್ಕಳಿಗೆ ಹಬ್ಬಗಳ ವಿಶೇಷತೆ ತಿಳಿಯುತ್ತಿತ್ತು. ಈಗ ಕುಟುಂಬ ಸಣ್ಣದಾಗಿದೆ. ಮನೆಯಲ್ಲಿ ಹಬ್ಬಗಳ ನೈವೇದ್ಯದ ಸಿಹಿಯನ್ನೂ ಅಂಗಡಿಗಳಿಂದ ತರುವಂತಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎನ್.ಆರ್.ಪುರ ವಲಯ ಮೇಲ್ವಿಚಾರಕ ಸಿದ್ದಲಿಂಗಪ್ಪ ಮಾತನಾಡಿ, ಯೋಜನೆಯ ಸದಸ್ಯರಿಗಾಗಿ ಪ್ರತಿ ತಿಂಗಳೂ ಏನಾದರೂ ಚಟುವಟಿಕೆ ನಡೆಸಲಾಗುತ್ತಿದೆ. ಮಹಿಳೆಯರ ಸುಪ್ತ ಪ್ರತಿಭೆ ಗುರುತಿಸಿ ಅನಾವರಣಗೊಳಿಸಲಾಗುತ್ತದೆ ಎಂದರು.
ಸರ್ಕಾರಿ ಆಸ್ಪತ್ರೆ ಎನ್‌ಸಿಡಿ ವೈದ್ಯಾಧಿಕಾರಿ ಡಾ. ನಿಶಾಲ್ ಅವರು ಮಹಿಳೆಯರ ಆರೋಗ್ಯ ರಕ್ಷಣೆ ಮಾಹಿತಿ ನೀಡಿದರು. ವೈದ್ಯರು ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರ ಆರೋಗ್ಯ ತಪಾಸಣೆ ನಡೆಸಿದರು. ಕಲಾವಿದರಾದ ವಿಶ್ರೇಯಾ ಹಾಗೂ ವಿದ್ಯಾ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜ್ಞಾನ ವಿಕಾಸ ಕೇಂದ್ರದ ಕೊಪ್ಪ, ಎನ್.ಆರ್.ಪುರ ತಾಲೂಕುಗಳ ಸಮನ್ವಯಾಧಿಕಾರಿ ಉಷಾ, ಜಯಲಕ್ಷ್ಮೀ, ಪ್ರಭಾವತಿ, ಭಾನುಮತಿ, ವೀಣಾ, ಸುನೀತಾ, ವಿಮಲಾ ಇದ್ದರು.