ಜಿಲ್ಲೆ

ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ: ಜಿಲ್ಲಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಮಂಡ್ಯ: ಜಿಲ್ಲಾದ್ಯಂತ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಣೆ ಮಾಡಿದರು.

ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಜಿಲ್ಲಾದ್ಯಂತ ಮಹಾಲಕ್ಷ್ಮೀ ಹಾಗೂ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಸಾಂಗೋಪ ಸಾಂಗವಾಗಿ ನಡೆದವು. ಭಕ್ತರು ಬೆಳಗ್ಗಿನಿಂದಲೇ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ವರವ ಬೇಡಿದರು.

ನಗರದ ಪೇಟೆಬೀದಿಯ ಶ್ರೀನಿವಾಸ ದೇವಸ್ಥಾನ ರಸ್ತೆಯಲ್ಲಿರುವ ವರಮಹಾಲಕ್ಷ್ಮೀ ಹಾಗೂ ಶ್ರೀಚಕ್ರ ಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆದವು. ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ, ಬೆಳ್ಳಿ ಅಲಂಕಾರ, ತೋಮಾಲೆ ಸೇವೆ, ಮಧ್ಯಾಹ್ನ ಮಹಾ ಮಂಗಳಾರತಿ, ತೀರ್ಥ, ಬೆಳಗ್ಗೆಯಿಂದ ಸಂಜೆಯವರೆಗೆ ಲಾಡು ಪ್ರಸಾದ ವಿನಿಯೋಗ ನಡೆಯಿತು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಅಮ್ಮನವರ ಆಶೀರ್ವಾದ ಪಡೆದರು.

ಬೆಳಗ್ಗೆ ಎಂ.ವೈ.ಕುಮಾರ ಹಾಗೂ ಎಂ.ಎನ್.ಯೋಗ ತಂಡದಿಂದ ಸ್ಯಾಕ್ಸೋಫೋನ್ ವಾದನ ಮತ್ತು ಪಿಟೀಲು ಗುರುಮೂರ್ತಿ, ವೆಂಕಟೇಶ್ ತಂಡದಿಂದ ಸಂಜೆ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಆಡಳಿತ ಮಂಡಳಿಯ ಎಸ್.ವೆಂಕಟೇಶ್, ಎಂ.ಎಸ್.ರಾಜಣ್ಣ, ಶಂಕರ್ ಸೇರಿದಂತೆ ಇತರರು ಇದ್ದರು.

ಹಬ್ಬದ ಸಂಭ್ರಮ: ನಗರ ಹಾಗೂ ಪಟ್ಟಣಗಳ ಜನರು ಮುಂಜಾನೆಯೇ ತಮ್ಮ ಮನೆಗಳನ್ನು ಶೃಂಗರಿಸಿ ಸುಂದರ ಮಂಟಪ ಸಿದ್ಧಪಡಿಸಿ, ಲಕ್ಷ್ಮೀ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಆಭರಣಗಳಿಂದ ಸಿಂಗರಿಸಿ ವಿಶೇಷ ಪೂಜೆ ನಡೆಸಿದರು. ಹಬ್ಬಕ್ಕಾಗಿಯೇ ವಿಶೇಷ ಸಿಹಿ ತಿಂಡಿ ತಿನಿಸುಗಳನ್ನಿಟ್ಟು ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಿದ್ದುದು ಕಂಡುಬಂತು.