ಜಿಲ್ಲೆ

ಬೆಲೆ ಏರಿಕೆ ಬಿಸಿಯಲ್ಲೂ ಖರೀದಿ ಖುಷಿ

ಪಂಕಜ ಕೆ.ಎಂ.
  • ರಾಜಧಾನಿಯ ಮಾರುಕಟ್ಟೆಗಳಲ್ಲಿ ಜನಜಂಗುಳಿ



ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ನಗರದೆಲ್ಲೆಡೆ ಮನೆ ಮಾಡಿದೆ. ಆದರೆ ಹಬ್ಬದಂದು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಬುಧವಾರ ಮಾರುಕಟ್ಟೆಗಳು ಜನರಿಂದ ಕಿಕ್ಕಿರಿದು ತುಂಬಿದ್ದವು. ಬಿರುಬಿಸಿಲನ್ನೂ ಲೆಕ್ಕಿಸದೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರೆ, ಗ್ರಾಹಕರು ಖರೀದಿಯಲ್ಲಿ ನಿರತರಾಗಿದ್ದರು.

ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ದಾಸರಹಳ್ಳಿ, ಮಡಿವಾಳ, ವಿಜಯನಗರ, ಜಯನಗರ, ಗಾಂಧಿ ಬಜಾರ್ ಸೇರಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿಗಳು, ಲಕ್ಷ್ಮೀಪೂಜೆಗೆ ಅಗತ್ಯವಿರುವ ಅಲಂಕಾರಿಕ ಸಾಮಗ್ರಿಗಳ ಖರೀದಿಯಲ್ಲಿ ನಿರತಾಗಿರುವ ಗ್ರಾಹಕರು ವ್ಯಾಪಾರಿಗಳೊಂದಿಗೆ ಚೌಕಾಶಿಗೆ ಇಳಿದಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರೆಡಿಮೇಡ್ ಲಕ್ಷ್ಮೀಯರು: ಮಾರುಕಟ್ಟೆಗಳಲ್ಲಿ ಆಕರ್ಷಕ ರೆಡಿಮೇಡ್ ಲಕ್ಷ್ಮೀಯರಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೆ ಲಕ್ಷ್ಮೀ ಪೂಜೆಗೆ ಅಲಂಕಾರ ಮಾಡಲು ಅಗತ್ಯವಾದ ಬಣ್ಣದ ಕಾಗದಗಳು, ಬಲೂನುಗಳು, ಕೃತಕ ಹಾರ, ಹೂಗಳು ಲಭ್ಯವಿವೆ. ಈ ಲಕ್ಷ್ಮೀಯ ವಿಗ್ರಹ 2,500 ರೂ.ಗಳಿಂದ 5 ಸಾವಿರ ರೂ.ವರೆಗೆ ದರ ಮಾರಾಟವಾಗುತ್ತಿದ್ದವು.

ಹೂ- ಹಣ್ಣುಗಳ ಬೆಲೆ ಏರಿಕೆ: ಈ ಬಾರಿ ಸಕಾಲದಲ್ಲಿ ಮಳೆ ಆಗದ ಕಾರಣ ಮಾರುಕಟ್ಟೆಯಲ್ಲಿ ಹೂವು, ಹಣ್ಣಿನ ಬೆಲೆ ಏರಿಕೆಯಾಗಿದೆ. ಬಾಳೆಹಣ್ಣು ಸೇರಿ ಕೆಲ ಹಣ್ಣುಗಳು ಹಾಗೂ ಮಲ್ಲಿಗೆ, ಕನಕಾಂಬರ ಸೇರಿ ಹೂ ಬೆಳೆಯುವಲ್ಲಿ ಬಾರಿ ಇಳಿಕೆಯಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಆದಾಗಿಯೂ ಗ್ರಾಹಕರಲ್ಲಿ ಉತ್ಸಾಹ ಕುಂದಿರಲಿಲ್ಲ.

1 ಕೆ.ಜಿ. ಏಲಕ್ಕಿ ಬಾಳೆಹಣ್ಣಿನ ಬೆಲೆ 100ರಿಂದ 120 ರೂ. ಇದೆ. ಕನಕಾಂಬರ ಹೂವು ಕೂಡ ಸಗಟು ದರದಲ್ಲಿ ಕೆ.ಜಿ. ಹೂವಿಗೆ 1,500 ರೂ. ದಾಟಿದೆ. ಮಲ್ಲಿಗೆ ಹೂವು 600- 1,000 ರೂ. ಇದೆ. ಇಷ್ಟಾಗಿಯೂ ತಮ್ಮ ಶಕ್ತ್ಯಾನುಸಾರ ಲಕ್ಷ್ಮೀಗೆ ಪ್ರಿಯವಾದ ತಾವರೆ, ಕೇದಗೆ, ಮಲ್ಲಿಗೆ ಹೂವು, ಮಳ್ಳೆ ಹೂವು, ಸುಗಂಧರಾಜ ಸೇರಿ ನಾನಾ ಹೂಗಳನ್ನು ಖರೀದಿಸಿದರು. ಪೂಜೆಗೆ ಅಗತ್ಯವಾದ ಬಾಳೆ, ಸೀಬೆ, ಸೇಬು, ಸೀತಾಫಲ, ಅನಾನಸ್, ದ್ರಾಕ್ಷಿ ಇತ್ಯಾದಿ ಹಣ್ಣುಗಳನ್ನು ಕೊಂಡರು. ಹಬ್ಬದ ಸಲುವಾಗಿ ಬಾಳೆಕಂದು, ಮಾವಿನ ಸೊಪ್ಪು, ಗಾಜಿನ ಬಳೆಗಳು, ಬಾಗೀನ ಕೊಡುವ ಸಾಮಗ್ರಿಗಳನ್ನು ಖರೀದಿಸಿ ಸಾಮಾನ್ಯವಾಗಿತ್ತು.

ಕೆ.ಆರ್. ಮಾರುಕಟ್ಟೆಯಲ್ಲಿ ಬಿಡಿ ಹೂವು ದರ (ಕೆ.ಜಿ.ಗಳಲ್ಲಿ)
* ಮಲ್ಲಿಗೆ 600-1000 ರೂ.
* ಮಳ್ಳೆ 600-700 ರೂ.
* ಕನಕಾಂಬರ 1200-1,500 ರೂ.
* ಸೇವಂತಿಗೆ 250-300 ರೂ.
* ಗುಲಾಬಿ 250-300 ರೂ.
* ಕಣಗಿಲೆ 300 ರೂ.
* ಸುಂಕಂದರಾಜ 200-250 ರೂ.
* ತಾವರೆ (ಜೋಡಿಗೆ) 50-100 ರೂ.
* ಕೇದಗೆ ಒಂದಕ್ಕೆ 50-70 ರೂ.
=====================
ಹಣ್ಣುಗಳ ದರ (ಕೆ.ಜಿ.ಗಳಲ್ಲಿ)
ಏಲಕ್ಕಿ ಬಾಳೆ 100-120 ರೂ.
ಪಚ್ಚಬಾಳೆ 40-45 ರೂ.
ಸೀತಾಫಲ 70-80 ರೂ.
ದಾಳಿಂಬೆ ಭಾಗ್ವ (ದೊಡ್ಡದು) 150 ರೂ.
ಸೀಡ್‌ಲೆಸ್ ದ್ರಾಕ್ಷಿ 200 ರೂ.
ಮೂಸಂಬಿ 70- 80ರೂ.
ಗ್ರೀನ್ ಸೇಬು 200 ರೂ.
ಅನಾನಸ್ 50 ರೂ.