ಕೋಲಾರ: ಕರೊನಾ ಆತಂಕವನ್ನೂ ಬದಿಗಿರಿಸಿ ನಗರ ಸೇರಿ ಜಿಲ್ಲೆಯಾದ್ಯಂತ ಸಂಪತ್ತಿನ ಅದಿ ದೇವತೆ ವರಮಹಾಲಕ್ಷ್ಮೀ ವ್ರತವನ್ನು ಜನತೆ ಶ್ರದ್ಧಾಭಕ್ತಿ, ಸಂಭ್ರಮ ಸಡಗರದಿಂದ ಶುಕ್ರವಾರ ಆಚರಿಸಿದರು.
ವರಮಹಾಲಕ್ಷ್ಮೀ ವ್ರತಾಚರಣೆ ಮಾಡುವುದರಿಂದ ಅಷ್ಟ ಐಶ್ವರ್ಯ ಸಿದ್ಧಿಸುತ್ತದೆ ಎಂಬ ನಂಬಿಕೆ ಭಕ್ತರದು. ಹೀಗಾಗಿ ಅನೇಕ ಮನೆಗಳಲ್ಲಿ ಬೆಳ್ಳಿಯ ಕಳಸವಿಟ್ಟರೆ ಕೆಲವು ಮನೆಗಳಲ್ಲಿ ವರಮಹಾಲಕ್ಷ್ಮೀಯ ಸುಂದರ ಮೂರ್ತಿ ಪ್ರತಿಷ್ಠಾಪಿಸಿ ಪಟ್ಟೆಸೀರೆ ಉಡಿಸಿ ತುಪ್ಪದ ದೀಪ ಹಚ್ಚಿ ಬಗೆಬಗೆಯ ಹೂವು, ಚಿನ್ನಾಭರಣಗಳಿಂದ ಅಲಂಕರಿಸಿ ಹಣ್ಣುಹಂಪಲುಗಳು, ತಿಂಡಿ ತಿನಸುಗಳನ್ನು ನೈವೇದ್ಯವಾಗಿ ಇಟ್ಟುಪೂಜೆ ಸಲ್ಲಿಸಿ ಆರತಿ ಬೆಳಗಿದರು.
ಪೂಜೆ ಅಂಗವಾಗಿ ಮುತ್ತೈದೆಯರಿಗೆ ಅರಿಸಿನ, ಕುಂಕುಮ ತಾಂಬೂಲ ನೀಡುವ ಮೂಲಕ ಮನೆಗೆ ಐಶ್ವರ್ಯದ ಅದಿದೇವತೆಯನ್ನು ಸ್ವಾಗತಿಸಿದರು. ನಗರದ ಕೆಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಬಿಕೋ ಎಂದ ಕಚೇರಿಗಳು: ವರಮಹಾಲಕ್ಷ್ಮೀ ಹಬ್ಬದಾಚರಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿದ್ದರೆ, ಸರ್ಕಾರಿ ನೌಕರ ವರ್ಗದವರ ಹಾಜರಾತಿಯೂ ವಿರಳವಾಗಿತ್ತು. ಸಾರ್ವಜನಿಕರಲ್ಲಿ ಬಹುತೇಕರು ತಮ್ಮಎಂದಿನ ಕಚೇರಿ ಕೆಲಸ ಕಾರ್ಯಗಳಿಗೆ ಹೋಗದೆ ಮನೆಯಲ್ಲೇ ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಸರ್ಕಾರಿ ಕಚೇರಿಗಳು ಸಾರ್ವಜನಿಕರಿಲ್ಲದೆ ಬಿಕೋ ಎನ್ನುತ್ತಿದ್ದವು.
ಜಿಲ್ಲಾಧಿಕಾರಿಗಳ ಕಚೇರಿ, ಜಿಪಂ ಸೇರಿ ವಿವಿಧ ಇಲಾಖೆ ಕಚೇರಿಗಳು ತೆರೆದಿದ್ದವಾದರೂ ಅಧಿಕಾರಿಗಳು, ನೌಕರರ ಹಾಜರಾತಿ ಕಡಿಮೆ ಇತ್ತು. ಮಹಿಳಾ ನೌಕರರಲ್ಲಿ ಬಹತೇಕರು ಕೆಲಸಕ್ಕೆ ಹಾಜರಾಗಿರಲಿಲ್ಲ.