ಜಿಲ್ಲೆ

ಎಲ್ಲೆಡೆ ವರಮಹಾಲಕ್ಷ್ಮೀಗೆ ವಿಶೇಷ ಪೂಜೆ ಸಂಭ್ರಮ

Vijayanagara - Veerendra
  • ಇಷ್ಟಾರ್ಥಗಳ ಸಿದ್ಧಿಗಾಗಿ ಪ್ರಾರ್ಥನೆ
    * ಮುತ್ತೈದೆಯರಿಗೆ ಅರಿಷಿಣ- ಕುಂಕುಮ ಭಾಗ್ಯ

ಹೊಸಪೇಟೆ: ಶ್ರಾವಣ ಮಾಸದ ೨ನೇ ಶುಕ್ರವಾರದ ನಿಮಿತ್ತ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಿಳೆಯರು ಶ್ರದ್ಧೆ, ಭಕ್ತಿ ಹಾಗೂ ಸಂಭ್ರಮ, ಸಡಗರದಿಂದ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದರು. ಕುಟುಂಬದ ಸಂಪತ್ತು ಹೆಚ್ಚಿಸುವಂತೆ ಕೋರಿ ವಿಶೇಷ ಪೂಜೆ ಸಲ್ಲಿಸಿ, ಮುತ್ತೈದೆಯರಿಗೆ ಉಡಿ ತುಂಬಿದರು.

ವರಮಹಾಲಕ್ಷ್ಮೀ ಪೂಜೆ ಅಂಗವಾಗಿ ಮಹಿಳೆಯರು ಶುಕ್ರವಾರ ಬೆಳಗ್ಗೆಯಿಂದಲೇ ಸಿದ್ಧತೆ ತೊಡಗಿದ್ದರು. ಮನೆಯ ಪ್ರಾಂಗಣದಲ್ಲಿ ಬಣ್ಣದ ರಂಗೋಲಿ ಬಿಡಿಸಿ, ಹಸಿರು ತೋರಣಗಳಿಂದ ಮನೆ ಬಾಗಿಲುಗಳನ್ನು ಸಿಂಗರಿಸಿದರು.

ವರಮಹಾಲಕ್ಷ್ಮೀಗೆ ಆಭರಣ ಅಲಂಕಾರ:
ಮನೆಯ ದೇವರ ಕೋಣೆ, ಪಡಸಾಲೆಯಲ್ಲಿ ತಾಯಿ ವರಮಹಾಲಕ್ಷ್ಮೀ ಮೂರ್ತಿಯನ್ನಿಟ್ಟು ವಿಶೇಷವಾಗಿ ಪೂಜೆ ನೆರವೇರಿಸಲಾಯಿತು. ದೇವರ ಬೆಳ್ಳಿಯ ಮುಕುಟ ಹಾಗೂ ಬೆಳ್ಳಿ ಮತ್ತಿತರೆ ಲೋಹಗಳಿಂದ ತಯಾರಿಸಿದ ಕಳಸ, ಸಣ್ಣ ಬಿಂದಿಗೆಗಳಿಗೆ ಹಸಿರು ಸೀರೆ ಸುತ್ತಿ, ವರಮಹಾಲಕ್ಷ್ಮೀ ಪ್ರಾಣ ಪ್ರತಿಷ್ಠಾಪಿಸಿದರು. ತಾಯಿಯ ಮೂರ್ತಿಗೆ ತಾಳಿ, ಚಿನ್ನದ ಸರ, ನೆಕ್ಲೇಸ್, ಲಾಂಗ್ ಚೈನ್, ಕೈಬಳೆ, ಡಾಬು ಸೇರಿದಂತೆ ಇನ್ನಿತರೆ ಚಿನ್ನಾಭರಣಗಳನ್ನು ತೊಡಿಸಿ, ವೈಭವೋಪೇತವಾಗಿ ಅಂಲಕರಿಸಲಾಗಿತ್ತು.

ಹಬ್ಬದ ನಿಮಿತ್ತ ತಯಾರಿಸಿದ ಸಿಹಿ ನೈವೇದ್ಯ ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಮನೆ ಮಂದಿಯಲ್ಲ ಒಟ್ಟಿಗೆ ಕುಳಿತು, ಹಬ್ಬದೂಟ ಸವಿದರು.
ಬಾಳೆ ಹಣ್ಣು, ಮೋಸಂಬಿ, ಸೇಬು ಸೇರಿದಂತೆ ತರಹೇವಾರಿ ಹಣ್ಣುಗಳನ್ನಿಟ್ಟು ಸಂಜೆ ಮತ್ತೊಮ್ಮೆ ಪೂಜೆ ಸಲ್ಲಿಸಿದರು. ಧನ, ಧಾನ್ಯ, ಆರೋಗ್ಯ, ಸಂತಾನ ಸೇರಿದಂತೆ ಮನೆಯ ಸಿರಿ ಸಂಪತ್ತು ವೃದ್ಧಿಸಲಿ ಎಂದು ಬೇಡಿಕೊಂಡರು. ಸಂಬAಧಿಕರು, ನೆರೆಹೊರೆಯ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ, ಅರಿಷಿಣ - ಕುಂಕುಮ, ಫಲಪುಷ್ಪ ನೀಡಿದರೆ, ಕೆಲ ಸ್ಥಿತಿವಂತರು ಆಹ್ವಾನಿತರಿಗೆ ಸೀರೆ, ರವಿಕೆ ನೀಡಿ, ಉಡಿ ತುಂಬುವ ಮೂಲಕ ಧನ್ಯತೆ ಮೆರೆದರು.

ಮುತ್ತೈದೆಯರಿಗೆ ಕುಂಕುಮ ಭಾಗ್ಯ
ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ಹೊಸಪೇಟೆ ಗ್ರಾಮದೇವತೆ ಊರಮ್ಮ ದೇವಸ್ಥಾನ, ಹೊಸೂರಮ್ಮ ದೇವಸ್ಥಾನ, ವಡಕರಾಯ ದೇವಸ್ಥಾನ ಹಾಗೂ ಪಂಪಾ ವಿರೂಪಾಕ್ಷೇಶ್ವರ ಸನ್ನಿಧಾನದಲ್ಲಿರುವ ತಾಯಿ ಭುವನೇಶ್ವರಿ, ಪಂಪಾAಬಿಕೆಯ ದರ್ಶನ ಪಡೆದ ಮುತ್ತೈದೆಯರಿಗೆ ಅರಿಷಿಣ ಕುಂಕುಮ ಹಾಗೂ ಹಸಿರು ಬಳೆಗಳನ್ನು ಉಡುಗೊರೆ ನೀಡಲಾಯಿತು.