ಜಿಲ್ಲೆ

239 ಕೆರೆಗೆ ಹರಿಯಿತು ವರದೆ ನೀರು

ವಿವೇಕಾನಂದ ದಾಸನಕೊಪ್ಪ

ಹಾನಗಲ್ಲ: ವರದಾ ನದಿ ಆಶ್ರಯಿಸಿ ರೂಪಿಸಿರುವ ಬಾಳಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ ಯೋಜನೆಗಳಿಂದ ತಾಲೂಕಿನ 239 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆರಂಭವಾಗಿದ್ದು, ರೈತರಲ್ಲಿ ಹರ್ಷ ಇಮ್ಮಡಿಗೊಂಡಿದೆ.

ಹಾನಗಲ್ಲ ತಾಲೂಕಿನಲ್ಲಿ 50 ಸಾವಿರ ಹೆಕ್ಟೇರ್​ಗೂ ಅಧಿಕ ಭೂಮಿಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಆವರಿಸಿಕೊಂಡಿದೆ. ಹಿರೇಕಾಂಶಿ ಏತ ನೀರಾವರಿ ಯೋಜನೆ 2022ರಲ್ಲಿಯೇ ಪೂರ್ಣಗೊಂಡು ಕೆರೆಗಳಿಗೆ ನೀರು ಹರಿಸುವ ಕಾರ್ಯ ಆರಂಭಿಸಿದೆ. ಗೊಂದಿ ಗ್ರಾಮದ ಬಳಿ ವರದಾ ನದಿಗೆ ಬ್ರಿಜ್ ನಿರ್ವಿುಸಿ, ಅಲ್ಲಿಂದ ನೀರೆತ್ತುವ ಮೂಲಕ 9 ಗ್ರಾಮಗಳ 77 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಈ 77 ಕೆರೆಗಳು 439 ಮಿಲಿಯನ್ ಕ್ಯೂಬಿಕ್ ಅಡಿ ನೀರು ತುಂಬಿಸುವ ಸಾಮರ್ಥ್ಯ ಹೊಂದಿವೆ. ಸದ್ಯ 329 ಮಿಲಿಯನ್ ಕ್ಯೂಬಿಕ್ ಅಡಿ ನೀರು ತುಂಬಿಸಲಾಗುತ್ತಿದೆ. 64 ಕಿ.ಮೀ. ಉದ್ದದ ಪೈಪ್​ಲೈನ್ ಮೂಲಕ ಈ ಕೆರೆಗಳಿಗೆ ನೀರು ಹರಿಯುತ್ತದೆ.

ಬಾಳಂಬೀಡ ಏತ ನೀರಾವರಿ ಯೋಜನೆಯಡಿ ಕಳೆದ ವರ್ಷವೇ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಈ ಯೋಜನೆಯಿಂದ 87 ಗ್ರಾಮಗಳ 162 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭವಾಗಿದೆ. ಮೊದಲ ಹಂತದಲ್ಲಿ 40 ಕೆರೆಗಳಿಗೆ ನೀರು ಹರಿಯುತ್ತಿದೆ. ಒಟ್ಟು ಈ ಕೆರೆಗಳಿಗೆ 1780 ಮಿಲಿಯನ್ ಕ್ಯೂಬಿಕ್ ಅಡಿ ನೀರು ತುಂಬಿಸಬಹುದಾಗಿದೆ. ಸದ್ಯ 1335 ಮಿಲಿಯನ್ ಕ್ಯೂಬಿಕ್ ಅಡಿ ನೀರು ತುಂಬಿಸಲಾಗುತ್ತಿದೆ. ಒಟ್ಟು 232 ಕಿ.ಮೀ. ಉದ್ದದ ಪೈಪ್​ಲೈನ್ ಮೂಲಕ ಈ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.

ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳೂ ಸೇರಿದಂತೆ ಹಾನಗಲ್ಲ ತಾಲೂಕಿನಾದ್ಯಂತ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ಹೀಗಾಗಿ ವರದಾ ನದಿಗೆ ಹರಿವು ಹೆಚ್ಚಾಗಿ ತುಂಬಿ ಹರಿಯುತ್ತಿದೆ. ನೂರು ದಿನ ನೀರು ಹರಿಸುವ ಯೋಜನೆ ಇದಾಗಿದ್ದರೂ ರೈತರ ಅನುಕೂಲಕ್ಕಾಗಿ ನದಿಯಲ್ಲಿ ನೀರು ಇರುವ ಸಂದರ್ಭ ಬಳಸಿಕೊಂಡು ಒಟ್ಟಾರೆ ಮಳೆಗಾಲವಿಡೀ ನೀರು ತುಂಬಿಸುವ ಉದ್ದೇಶ ಈ ಯೋಜನೆಗಳದ್ದಾಗಿದೆ.

ಹಾನಗಲ್ಲ ತಾಲೂಕಿಗೆ ಕೂಸನೂರ, ನರೇಗಲ್ ಏತ ನೀರಾವರಿ ಯೋಜನೆಗಳು ಮಂಜೂರಾಗುವ ಹಂತದಲ್ಲಿವೆ. ಸ್ಥಳೀಯ ಶಾಸಕ ಶ್ರೀನಿವಾಸ ಮಾನೆ ಆಸಕ್ತಿ ವಹಿಸಿ ಯೋಜನೆಗಳ ಮಂಜೂರಿಗೆ ಮನವಿ ಮಾಡಿದ್ದಾರೆ. ಇದರಿಂದ ತಾಲೂಕಿನ ಬಹುತೇಕ ಕೃಷಿಭೂಮಿ ನೀರಾವರಿಗೆ ಒಳಪಡಲಿದೆ.

ಹಾನಗಲ್ಲ ತಾಲೂಕಿನಲ್ಲಿ ಬಾಳಂಬೀಡ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅಚ್ಚುಕಟ್ಟು ಪ್ರದೇಶದ ಕೆರೆಗಳನ್ನು ತುಂಬಿಸಲಾಗುತ್ತಿದೆ. ಬಸಾಪುರ ಏತ ನೀರಾವರಿ ಯೋಜನೆ ಪುನರಾರಂಭಿಸಲಾಗಿದೆ. ತಿಳವಳ್ಳಿ, ಹೊಂಕಣ ನೀರಾವರಿ ಯೋಜನೆಗಳ ಪಂಪ್ ಕೆಲವೇ ದಿನಗಳಲ್ಲಿ ಆರಂಭಿಸಿ ಕೆರೆಗಳಿಗೆ ನೀರು ಹರಿಸಲಾಗುವುದು. ತಾಲೂಕನ್ನು ಸಂಪೂರ್ಣವಾಗಿ ನೀರಾವರಿ ವ್ಯಾಪ್ತಿಗೆ ತರಲು ಕೂಸನೂರ, ನರೇಗಲ್ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಗಮನ ಸೆಳೆಯಲಾಗಿದೆ.

| ಶ್ರೀನಿವಾಸ ಮಾನೆ, ಶಾಸಕ, ಹಾನಗಲ್ಲ

ಬಾಳಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕಿನ 239 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭವಾಗಿದೆ. ನಿರಂತರವಾಗಿ ನೂರು ದಿನ ನೀರು ತುಂಬಿಸಲಿದ್ದೇವೆ.

| ಪ್ರಲ್ಹಾದ್ ಶೆಟ್ಟಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಏತ ನೀರಾವರಿ ಹಾನಗಲ್ಲ