ಚಿಕ್ಕಬಳ್ಳಾಪುರ: ಬೆಂಗಳೂರು ಉಪ ನಗರ ರೈಲ್ವೆ ಸೇವೆ ವಿಸ್ತರಣೆಯ ಯೋಜನೆಯ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಡ್ರೋನ್/ಮೊಬೈಲ್ ಲೈನರ್ ಸರ್ವೆಯನ್ನು ಇಲಾಖೆ ಕೈಗೊಳ್ಳುತ್ತಿದೆ.
ಚೆನ್ನಸಂದ್ರದಿಂದ ದೊಡ್ಡಬಳ್ಳಾಪುರ, ಬೆಂಗಳೂರು ನಗರದಿಂದ ಯಶವಂತಪುರ, ಯಶವಂತಪುರದಿಂದ ಯಲಹಂಕ, ಯಶವಂತಪುರದಿಂದ ಸಂಪಂಗಿ ರಸ್ತೆ, ಯಶವಂತಪುರದಿಂದ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಮಾರ್ಗವಾಗಿ ಸರ್ವೆ ಕಾರ್ಯ ಕೈಗೊಂಡು ವರದಿ ನೀಡಲು ಸೂಚಿಸಲಾಗಿದೆ. ಇದಕ್ಕಾಗಿ ಬೆಂಗಳೂರಿನ ನಾರಚಿ ಕನ್ಸಲ್ಟೆನ್ಸಿ ಸಂಸ್ಥೆಗೆ ಜವಾಬ್ದಾರಿ ವಹಿಸಿದ್ದು ಈಗಾಗಲೇ ಪ್ರಕ್ರಿಯೆ ಬಹುತೇಕ ಮುಕ್ತಾಯ ಹಂತದಲ್ಲಿದೆ.
ರಾಜಧಾನಿಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರವನ್ನು ಕೇಂದ್ರವಾಗಿರಿಸಿಕೊಂಡು ರೈಲ್ವೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ನಾನಾ ಯೋಜನೆಗಳ ಘೋಷಣೆ, ಕೆಲಸಗಳ ಅನುಷ್ಠಾನಗೊಳ್ಳುತ್ತಿದೆ. ಈಗಾಗಲೇ ವಿದ್ಯುತ್ ಚಾಲಿತ ರೈಲ್ವೆ ಸಂಚಾರದ ಕಾಮಗಾರಿ ಪ್ರಗತಿಯಲ್ಲಿದೆ.
* ರೈಲ್ವೆ ಸರ್ವೆ ಕಾರ್ಯ
ಕೇಂದ್ರ ಸರ್ಕಾರದ ನೂತನ ವಂದೇ ಭಾರತ್ ರೈಲುಗಳು ವಿವಿಡೆ ಸಂಚರಿಸುತ್ತಿವೆ. ಸಮಯದ ಉಳಿತಾಯ, ಪ್ರಯಾಣಿಕರಿಗೆ ಅನುಕೂಲಕರ ಸೇವೆಯ ಮೂಲಕ ಮೆಚ್ಚುಗೆಗೆ ಗಳಿಸಿವೆ. ಇದರ ನಡುವೆ ಈ ಭಾಗದಲ್ಲಿ ಸಂಚಾರಕ್ಕೆ ಯೋಗ್ಯವಾಗಿರುವುದರ ಅಧ್ಯಯನಕ್ಕಾಗಿ ಸರ್ವೆ ಕಾರ್ಯ ಕೈಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರಸ್ತುತ ಈ ಭಾಗದಲ್ಲಿ ಅಳವಡಿಸಿರುವ ರೈಲ್ವೆ ಹಳಿಗಳ ಗೇಜ್, ಇರುವ ನಿಲ್ದಾಣಗಳು, ಪ್ರಮುಖ ಹಳಿ ತಿರುವುಗಳು, ಸೇತುವೆಗಳು, ರೈಲ್ವೆ ಕ್ರಾಸಿಂಗ್ ಸೇರಿದಂತೆ ನಾನಾ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪೂರಕವಾದ ವರದಿ ಸಿಕ್ಕಿದ್ದಲ್ಲಿ ಇಲ್ಲೂ ವಂದೇ ಭಾರತ್ ರೈಲುಗಳು ಓಡಾಡಲಿವೆ.
* ರೈಲ್ವೆ ಸೇವೆ ಹೆಚ್ಚಳದ ನಿರೀಕ್ಷೆ
ಜಿಲ್ಲೆಯಲ್ಲಿ ರೈಲ್ವೆ ಸೇವೆ ಅಭಿವೃದ್ಧಿಗೆ ಪೂರಕವಾಗಿ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಗರ ಮಾರ್ಗವಾಗಿ 1.10 ಕೋಟಿ ರೂ ವೆಚ್ಚದಲ್ಲಿ ನೂತನ ಹಳಿ ನಿರ್ಮಾಣದ ಅಂತಿಮ ಸರ್ವೆ ಕಾರ್ಯವನ್ನು ಕೇಂದ್ರ ರೈಲ್ವೆ ಇಲಾಖೆಯು ಕೈಗೊಂಡಿದೆ. ಇದರ ಅನುಮೋದಿತ ವರದಿ ಇನ್ನೂ ಹೊರಬರಬೇಕಾಗಿದೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ-ಬಾಗೇಪಲ್ಲಿ-ಪುಟ್ಟಪರ್ತಿ ರೈಲು ಸಂಚಾರ ಪ್ರಾರಂಭವು ಈ ಭಾಗದ ಪ್ರಮುಖ ಬೇಡಿಕೆ. ತಾಲೂಕಿನ ಮುದ್ದೇನಹಳ್ಳಿಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆ ಇದೆ. ವಿದೇಶಿಗರು ಸೇರಿದಂತೆ ಪುಟ್ಟಪರ್ತಿ ಭಗವಾನ್ ಸಾಯಿಬಾಬಾರ ಸಾವಿರಾರು ಭಕ್ತರು ಪುಟ್ಟಪರ್ತಿಗೆ ಪ್ರತಿನಿತ್ಯ ಸಂಚರಿಸುತ್ತಿರುತ್ತಾರೆ. ಜತೆಗೆ ಆಂಧ್ರ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿಯ ಸರ್ವಾಂಗೀಣ ಅಭಿವೃದ್ಧಿಗೆ ರೈಲು ಸಂಚಾರ ಸಹಕಾರಿ. ಈ ಹಿನ್ನೆಲೆಯಲ್ಲಿ ಪುಟ್ಟಪರ್ತಿಗೆ ಚಿಕ್ಕಬಳ್ಳಾಪುರದಿಂದ ರೈಲು ಸೇವೆ ಒದಗಿಸಲು ಒತ್ತಾಯಿಸಲಾಗುತ್ತಿದೆ.