ಹುಬ್ಬಳ್ಳಿ: ಬಂಕಿಮ್ ಚಂದ್ರ ಚಟರ್ಜಿ ಅವರು ರಚನೆ ಮಾಡಿದ ವಂದೇ ಮಾತರಂ ರಾಷ್ಟ್ರ ಗಾನಕ್ಕೆ 150 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸಾಮೂಹಿಕವಾಗಿ ಹೇಳುವ ಕಾರ್ಯಕ್ರಮವನ್ನು ನಗರದ ಸಂಸ್ಕೃತಿ ಟ್ರಸ್ಟ್ ವತಿಯಿಂದ ಜ. 25ರಂದು ಸಂಜೆ 4ಕ್ಕೆ ಇಲ್ಲಿಯ ಮೂರುಸಾವಿರ ಮಠದ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ವೇದಾ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿವಿಬಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಸಂಗೀತಾ ಕೋಲವೇಕರ ಅತಿಥಿಗಳಾಗಿ, ಆರ್ ಎಸ್ಎಸ್ ಜೇಷ್ಠ ಪ್ರಚಾರಕ ಸು. ರಾಮಣ್ಣ ಮುಖ್ಯ ವಕ್ತಾರರಾಗಿ ಪಾಲ್ಗೊಳ್ಳುವರು. ಸಂಸ್ಜೃತ ಹಾಗೂ ಬಂಗಾಳಿ ಭಾಷೆಗಳನ್ನು ಒಳಗೊಂಡ ವಂದೇ ಮಾತರಂ ಕೇವಲ ಎರಡು ನುಡಿಗಳಿಗೆ ಸೀಮಿತವಾಗದೇ ಇಡೀ ರಾಷ್ಟ್ರ ಗಾನದ ಸ್ವಾದ ಸಾರವನ್ನು ದೇಶಕ್ಕೆ ಪ್ರಚುರಪಡಿಸಿ ಎಲ್ಲರ ನಾಲಿಗೆಯ ಮೇಲೂ ಹರಿದಾಡಲಿ ಎಂಬ ಉದ್ದೇಶದಿಂದ ಸಂಸ್ಕೃತಿ ಟ್ರಸ್ಟ್ ಅಖಂಡ ವಂದೇ ಮಾತರಂ ನುಡಿ ನಮನ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಪುರುಷರು, ಮಹಿಳೆಯರು, ಮಕ್ಕಳು ಎಲ್ಲರೂ ಅತಿ ಹೆಚ್ಚು ಸಂಖ್ಯೆಯಲ್ಲಿ ಒಂದೆಡೆ ಸೇರಿ ವಂದೇ ಮಾತರಂ ಹೇಳುವ ಮೂಲಕ ಭಾರತಮಾತೆಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ವಿದ್ಯಾಥಿರ್ಗಳು ಹೆಚ್ಚು ಭಾಗವಹಿಸಬೇಕು ಎಂಬ ಉದ್ದೇಶದಿಂದ ಬಿಇಒ ಅನುಮತಿಯೊಂದಿಗೆ ನಗರದ ಶಾಲೆ ಕಾಲೇಜುಗಳನ್ನು ಸಂಪರ್ಕಿಸಲಾಗಿದೆ. ಅಲ್ಲದೇ ಸಂಘ ಸಂಸ್ಥೆಗಳು ಸ್ವತಃ ಮುಂದೆ ಬಂದಿವೆ. ಈ ಹಿನ್ನೆಲೆಯಲ್ಲಿ ಅಭ್ಯಾಸ ವರ್ಗಗಳನ್ನು ನಡೆಸಿ ಹಾಡಿನ ಧಾಟಿ, ಉಚ್ಚಾರ, ಸ್ವರ ಪರಿಚಯ ಮಾಡಿಸಲಾಗಿದೆ. ಶಾಲೆ ಕಾಲೇಜಿಗೆ ಕಾರ್ಯಕರ್ತರು ಹೋಗಿ ಪ್ರಶಿಕ್ಷಣ ನೀಡಿದ್ದಾರೆ. ಸುಮಾರು 850 ಜನರಿಗೆ ಪ್ರಶಿಕ್ಷಣ ನೀಡಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು 1500 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಟ್ರಸ್ಟಿಗಳಾದ ಆಶಾ ನಾಯಕ, ಶಾಂತಾ ವೇರ್ಣೇಕರ, ಅರುಣಾ ದೇಶಪಾಂಡೆ, ಸಂದೀಪ ಬೂದಿಹಾಳ ಗೋಷ್ಠಿಯಲ್ಲಿದ್ದರು.