ವಂದೇ ಭಾರತ್ ಎಕ್ಸ್‌ಪ್ರೆಸ್‌ 
ಜಿಲ್ಲೆ

ಜೂನ್ ಅಂತ್ಯಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಾಯೋಗಿಕ ಸಂಚಾರ

ಮಂಗಳೂರು : ಕರ್ನಾಟಕದ ಕರಾವಳಿ ಪ್ರದೇಶ ಮತ್ತು ರಾಜ್ಯ ರಾಜಧಾನಿ ಬೆಂಗಳೂರು ನಡುವಿನ ಹೈಸ್ಪೀಡ್ ರೈಲು ಸಂಪರ್ಕದ ಕನಸನ್ನು ನನಸಾಗಿಸುವತ್ತ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ.
ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ ಸವಾಲಿನ 55 ಕಿಮೀ ಘಾಟ್ ವಿಭಾಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಸಂಚಾರ ಜೂನ್ ಕೊನೆಯ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.
ರೈಲ್ವೆ ಸಚಿವಾಲಯದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ ಈ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಿದೆ. ಹಾಸನ-ಮಂಗಳೂರು ರೈಲ್ವೆ ಮಾರ್ಗದ ಈ ಘಾಟಿ ವಿಭಾಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರ ನಿರ್ದೇಶನದಂತೆ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 30 ಕಿ.ಮೀ ಗೆ ಸೀಮಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ವಂದೇ ಭಾರತ್ ರೈಲಿಗೆ ವಿಶೇಷವಾದ ‘ಸ್ವಯಂಚಾಲಿತ ತುರ್ತು ಬ್ರೇಕಿಂಗ್’ ವ್ಯವಸ್ಥೆಯನ್ನು ಅಳವಡಿಸುವುದು ಕಡ್ಡಾಯವಾಗಿದೆ.
ರೈಲು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸಿದರೆ, ಈ ಎಇಬಿ ವ್ಯವಸ್ಥೆಯು ತಾನಾಗಿಯೇ ವೇಗವನ್ನು ಕಡಿಮೆ ಮಾಡುತ್ತದೆ. ಈ ತಂತ್ರಜ್ಞಾನವನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿನಲ್ಲಿ ರೈಲಿನ ಬೋಗಿಗಳಿಗೆ ಅಳವಡಿಸಲಾಗುತ್ತಿದ್ದು, ಮುಂದಿನ ವಾರ ರೈಲು ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಘಾಟಿ ವಿಭಾಗದಲ್ಲಿ ಈಗಾಗಲೇ ಐಸಿಎಫ್ ಮತ್ತು ಎಲ್‌ಎಚ್‌ಬಿ ಬೋಗಿಗಳ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದೆ. ಈಗ ವಂದೇ ಭಾರತ್ ರೈಲಿನ ಪ್ರಾಯೋಗಿಕ ಪರೀಕ್ಷೆ ಬಾಕಿ ಇದೆ. ಇದಕ್ಕಾಗಿ ಎಇಬಿ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ ಸಿದ್ಧವಾಗುತ್ತಿದೆ’ ಎಂದು ತಿಳಿಸಿದ್ದಾರೆ. ಜೂನ್ ಎರಡನೇ ವಾರದಿಂದ ಆರಂಭವಾದ ಈ ಪರೀಕ್ಷೆಗಳಲ್ಲಿ 5 ದಿನಗಳ ಕಾಲ 5 ಟ್ರಿಪ್‌ಗಳನ್ನು ನಡೆಸಲಾಗಿದ್ದು, ಎಲ್ಲಾ ತಾಂತ್ರಿಕ ಮಾನದಂಡಗಳನ್ನು ಪೂರೈಸಲಾಗಿದೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯವಸ್ಥಾಪಕ ಮುದಿತ್ ಮಿತ್ತಲ್ ಮಾಹಿತಿ ನೀಡಿದ್ದಾರೆ.
ಈ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ, ಆರ್‌ಡಿಎಸ್‌ಒ ರೈಲ್ವೆ ಸಚಿವಾಲಯಕ್ಕೆ ಹಸಿರು ನಿಶಾನೆ ತೋರಿಸಿದರೆ, ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಓಡಾಟಕ್ಕೆ ಇದ್ದ ಅತಿದೊಡ್ಡ ತಾಂತ್ರಿಕ ಅಡಚಣೆ ದೂರವಾಗಲಿದೆ. ಇದು ಕರಾವಳಿ ಕರ್ನಾಟಕದ ಜನರಿಗೆ ರಾಜಧಾನಿಗೆ ಹೋಗಲು ಅತ್ಯಂತ ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸಲಿದೆ.
ಈ ಮಾರ್ಗದ ವಿದ್ಯುದೀಕರಣ ಕಾರ್ಯವು ಡಿಸೆಂಬರ್ 2025 ರಲ್ಲಿ ಪೂರ್ಣಗೊಂಡಿತ್ತು. ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆಯವರೆಗಿನ ರೈಲ್ವೆ ಮಾರ್ಗದ ವಿದ್ಯುದೀಕರಣವನ್ನು ರೈಟ್ಸ್ ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸಿದೆ. ಪ್ರಾಯೋಗಿಕ ಸಂಚಾರದ ನಂತರ ಕರಾವಳಿ ಭಾಗಕ್ಕೆ ಶೀಘ್ರದಲ್ಲೇ ವಂದೇ ಭಾರತ್ ಭಾಗ್ಯ ಸಿಗುವ ನಿರೀಕ್ಷೆಯಿದೆ.