ಜಿಲ್ಲೆ

ಧಾರವಾಡಕ್ಕೂ ಬಂದ ವಂದೇ ಭಾರತ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ವಂದೇ ಭಾರತ ರೈಲು ಧಾರವಾಡವರೆಗೂ ಸಂಚರಿಸಬೇಕು ಎಂಬುದು ನಗರದ ಜನರ ಹಲವು ದಿನಗ ಬೇಡಿಕೆ ಆಗಿತ್ತು. ಇದೀಗ ಆ ಬೇಡಿಕೆ ಈಡೇರಿಕೆ ಸಮಯ ಬಂದಿದ್ದು, ಸೋಮವಾರ ಪರೀಕ್ಷಾರ್ಥ ರೈಲು ಸಂಚಾರ ಸಹ ನಡೆಸಲಾಗಿದೆ.
ರೈಲ್ವೆ ಇಲಾಖೆ ತಾತ್ಕಾಲಿಕವಾಗಿ ಬಿಡುಗಡೆ ಮಾಡಿರುವ ವೇಳಾಪಟ್ಟಿಗಿಂತ 40 ನಿಮಿಷ ಮೊದಲೇ (ಮಧ್ಯಾಹ್ನ 12 ಗಂಟೆಗೆ) ರೈಲು ನಿಲ್ದಾಣಕ್ಕೆ ರೈಲು ಆಗಮಿಸಿತ್ತು. ಈ ಮಾಹಿತಿ ಅರಿತ ನಗರದ ಜನರು ನಿಲ್ದಾಣಕ್ಕೆ ಆಗಮಿಸಿ ರೈಲು ವೀಕ್ಷಣೆ ಮಾಡಿ ಖುಷಿ ಪಟ್ಟರು. ಹವಾನಿಯಂತ್ರಿ ಬೋಗಿಯಲ್ಲಿ ಉತ್ತಮ ಆಸನ ಸೇರಿ ಸಕಲ ಸೌಲಭ್ಯಗಳನ್ನು ವೀಕ್ಷಿಸಿದ ಜನರು, ರೈಲಿನ ಎದುರು ಹಾಗೂ ಚೇರ್ ಮೇಲೆ ಕುಳಿತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಬೆಂಗಳೂರಿನಿಂದ ಧಾರವಾಡವರೆಗೆ ಈ ರೈಲು ಜೂ. 26ರಿಂದ ಅಧಿಕೃತವಾಗಿ ಸಂಚಾರ ನಡೆಸಲಿದೆ. ಪರೀಕ್ಷಾರ್ಥ ಅಂಗವಾಗಿ ಸೋಮವಾರ ಹುಬ್ಬಳ್ಳಿ ನಿಲ್ದಾಣದಿಂದ ಆಗಮಿಸಿದ ರೈಲಿನಲ್ಲಿ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ ಕಿಶೋರ್ ಸೇರಿ ಇತರ ವಿಭಾಗದ ಅಧಿಕಾರಿಗಳು ಧಾರವಾಡಕ್ಕೆ ಆಗಮಿಸಿದರು. ನಂತರ 12.15ರ ಹೊತ್ತಿಗೆ ಮತ್ತೆ ಬೆಂಗಳೂರಿನತ್ತ ತೆರಳಿತು.
ಸಂಜೀವ ಕಿಶೋರ ಮಾತನಾಡಿ, ರೈಲು ಬೆಳಿಗ್ಗೆ 5.45ಕ್ಕೆ ಬೆಂಗಳುರು ಬಿಟ್ಟಿತ್ತು. ತಾಂತ್ರಿಕ ತಂಡ ಹಾಗೂ ಅಧಿಕಾರಿಗಳು ರೈಲಿನಲ್ಲಿದ್ದರು. ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಎಲ್ಲ ರೀತಿಯಲ್ಲಿ ಸಂಪೂರ್ಣವಾಗಿ ನಡೆಸಿದ ಪರೀಕ್ಷೆ ಯಶಸ್ವಿಯಾಗಿದೆ. ಇತ್ತೀಚಿಗಷ್ಟೇ ಧಾರವಾಡ-ಬೆಂಗಳೂರು ಮಧ್ಯೆ ಎಲೆಕ್ಟ್ರಿಕಲ್ ಲೈನ್ ಮಾಡಿದ ಪರಿಣಾಮ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಯಶಸ್ವಿಯಾಗಿದ್ದರಿಂದ ನಮ್ಮ ಸಿಬ್ಬಂದಿ ಖುಷಿಯಾಗಿದ್ದಾರೆ. ಇದು ಪ್ರಾಯೋಗಿಕ ಸಂಚಾರ ಇರುವ ಕಾರಣ ಸಮಯದಲ್ಲಿ ವ್ಯತ್ಯಾಸ ಆಗಲಿದೆ. ಅಧಿಕೃತ ಸಂಚಾರ ಆರಂಭವಾದ ಬಳಿಕ ನಿಗದಿತ ವೇಳೆಗೆ ಆಗಮಿಸಲಿದೆ. ಶೀಘ್ರದಲ್ಲಿ ಅಧಿಕೃತ ವೇಳಾಪಟ್ಟಿ ಸಹ ಬಿಡುಗಡೆಯಾಗಲಿದೆ ಎಂದರು.