ಭದ್ರಾವತಿ ತಾಲೂಕು ಹೊಳೆಹೊನ್ನೂರಿನಲ್ಲಿ ಧ್ವಂಸಗೊಂಡ ಮಹಾತ್ಮ ಗಾಂಧೀಜಿ ಪ್ರತಿಮೆ. 
ಜಿಲ್ಲೆ

ಎರಡೇ ಏಟಿಗೆ ಪ್ರತಿಮೆ ಢಮಾರ್

ಹೊಳೆಹೊನ್ನೂರು: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ವಣದ ಹೃದಯಭಾಗ ಗಾಂಧಿ ವೃತ್ತದಲ್ಲಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಭಾನುವಾರ ತಡರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಇದರಿಂದ ಸೋಮವಾರ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಆರು ದಿನಗಳ ಹಿಂದೆ ಸ್ವಾತಂತ್ರೊೃೀತ್ಸವ ಆಚರಣೆಗಾಗಿ ಗಾಂಧಿ ಪ್ರತಿಮೆಯ ಜಾಗವನ್ನು ಸ್ವಚ್ಛಗೊಳಿಸಿ ಪ್ರತಿಮೆಗೆ ಬಣ್ಣ ಹಚ್ಚಿ ಸಿಂಗರಿಸಲಾಗಿತ್ತು. ಭಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಎರಡೇ ಏಟಿಗೆ ಗಾಂಧಿ ಪ್ರತಿಮೆಯನ್ನು ಗುದ್ದಿ ಬೀಳಿಸಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಬೆಳ್ಳಂಬೆಳಗ್ಗೆ ಗಾಂಧಿ ಪ್ರತಿಮೆ ಧ್ವಂಸ ಸುದ್ದಿ ಹರಡುತ್ತಿದಂತೆ ಪ್ರತಿಮೆ ಬಳಿ ಸ್ಥಳೀಯರು ಜಮಾಯಿಸಿದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸ್ಥಳಕ್ಕೆ ದೌಡಾಯಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕೃತ್ಯವೆಸಗಿದವರ ವಿರುದ್ಧ ಸ್ಥಳೀಯರು ಧಿಕ್ಕಾರ ಕೂಗಿ ಸರ್ಕಲ್ ಬಂದ್ ಮಾಡಿ ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದರು.
ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆಗಿಳಿದ ಸಾರ್ವಜನಿಕರಿಂದ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಜನಜಂಗುಳಿಯಿಂದ ತುಂಬಿಹೋಯಿತು. ಸ್ಥಳೀಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಆದರೂ ಸಾಧ್ಯವಾಗದಿದ್ದಾಗ ಭದ್ರಾವತಿ, ಶಿವಮೊಗ್ಗದಿಂದ ಹೆಚ್ಚುವರಿಯಾಗಿ ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಪ್ರತಿಭಟನಾಕಾರರು ಮಾತನಾಡಿ, ಗಾಂಧಿ ಪ್ರತಿಮೆಯನ್ನು ಧ್ವಂಸ ಮಾಡಿದವರನ್ನು ಕೂಡಲೆ ಪತ್ತೆ ಮಾಡಿ ಅವರಿಂದಲೇ ಗಾಂಧಿ ಪ್ರತಿಮೆಯನ್ನು ಮರುಸ್ಥಾಪಿಸಬೇಕು ಎಂದು ಪಟ್ಟುಹಿಡಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಪ್ರತಿಭಟನಾಕಾರರ ಮನವೊಲಿಸಿ ಮಾತನಾಡಿ, ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ. ಆರೋಪಿಗಳನ್ನು ಕೂಡಲೆ ಪತ್ತೆಹಚ್ಚಿ ಕ್ರಮ ಜರುಗಿಸಲಾಗುವುದು. ಅದೇ ಸ್ಥಳದಲ್ಲಿ ಹೊಸದಾಗಿ ಗಾಂಧಿ ಪ್ರತಿಮೆ ನಿರ್ಮಾಣದ ಬಗ್ಗೆ ಜಿಲ್ಲಾಡಳಿತದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.
ಸ್ಥಳಕ್ಕೆ ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಜನರ ಜತೆ ಮಾತುಕತೆ ನಡೆಸಿದರು. ಹೊಳೆಹೊನ್ನೂರು ಠಾಣೆಗೂ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.