ಜಿಲ್ಲೆ

ವನವಾಸಿ ಮಕ್ಕಳ ವಿದ್ಯಾ ವಿಕಸನಕ್ಕೆ ‘ವನಚೇತನ’

Dakshina Kannada

ಮಂಗಳೂರು: ಒಂದೂವರೆ ವರ್ಷದಿಂದ ಕೋವಿಡ್ ಕಾರಣದಿಂದ ಉತ್ತರ ಕನ್ನಡದ ಆದಿವಾಸಿ ಮಕ್ಕಳಲ್ಲಿ ಉತ್ಸಾಹ ಸೊರಗಿ, ಸೃಜನಶೀಲತೆಗೆ ಮಸುಕು ಉಂಟಾದಾಗ ಅವರ ಕೈ ಹಿಡಿದು ಚೈತನ್ಯ ತುಂಬಿದ್ದು ಮಂಗಳೂರಿನ ಸಹ್ಯಾದ್ರಿ ಸಂಚಯ.

ಜೋಯ್ಡ, ಯಲ್ಲಾಪುರ, ಅಣಶಿಯಂಥ ಅರಣ್ಯದ ಸೆರಗಿನಲ್ಲಿರುವ ಊರುಗಳಲ್ಲಿ ಇರುವ ಹಲವು ಶಾಲೆಗಳ ಮಕ್ಕಳ ಮೊಗದಲ್ಲಿ ಮತ್ತೆ ನಗು ತರಿಸಿ, ಸಾಂಕ್ರಾಮಿಕದ ಕಾರಣದಿಂದ ತಗ್ಗಿದ್ದ ಚುರುಕುತನ ಮತ್ತೆ ಮೂಡಿಸುವ ಯತ್ನ ಮಾಡಿದವರು ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ. ಕಳೆದ ವರ್ಷ ‘ವನಬೆಳಕು’ ಎಂಬ ಕಾರ್ಯಕ್ರಮ ಮೂಲಕ ಯಲ್ಲಾಪುರ, ಅಂಕೋಲ, ಮುಂಡಗೋಡ, ಜೋಯ್ಡ, ಅಣಶಿ, ದಾಂಡೇಲಿ, ಹಳಿಯಾಳ, ಕಾಳಿ ಹುಲಿ ರಕ್ಷಿತಾರಣ್ಯದ ಆಸುಪಾಸು ಎರಡು ಹಂತಗಳಲ್ಲಿ ‘ವನಬೆಳಕು’ ಹರಡಿದ್ದರು. ಈ ಬಾರಿ ಹೆಚ್ಚು ವ್ಯವಸ್ಥಿತವಾಗಿ ‘ವನಚೇತನ’ ಆಯೋಜಿಸಲಾಗಿದೆ.

ವನಬೆಳಕಿನಲ್ಲಿ ಅಡವಿ ಮಕ್ಕಳ ಸೃಜನ ವಿಕಸನವಾದರೆ ವನಚೇತನದಲ್ಲಿ ಮಕ್ಕಳ ವಿದ್ಯಾ ವಿಕಸನಕ್ಕೆ ಹೆಚ್ಚು ಒತ್ತು. ಟೆಲಿವಿಷನ್ ಪರದೆಗಳನ್ನು ಶಾಲೆಗಳಿಗೆ ಒಯ್ದು ಅಲ್ಲಿ ಪಾಠಗಳನ್ನು ಪ್ರದರ್ಶಿಸುವುದು. ಅಲ್ಲದೆ ಮಕ್ಕಳ ಕ್ರಿಯಾತ್ಮಕತೆ ಹೆಚ್ಚಿಸುವ ಆಟಗಳನ್ನು ಆಡಿಸುವುದು, ಕೌಶಲ ಕಲೆಗಳು, ನೃತ್ಯ, ಆಕರ್ಷಕ ಕೈ ಬರಹ, ಗಾಳಿಪಟ ತಯಾರಿಕೆ ಇತ್ಯಾದಿ ಹತ್ತು ಹಲವು ಕಾರ್ಯಕ್ರಮಗಳನ್ನು ಜೋಡಿಸಿಕೊಳ್ಳಲಾಗುತ್ತದೆ. ಸಹಜ ವಾತಾವರಣದಲ್ಲಿ ಶಾಲೆಗಿಂತಲೂ ಹೆಚ್ಚು ಖುಷಿಯಲ್ಲಿ ಮಕ್ಕಳು ಕಲಿತುಕೊಳ್ಳುತ್ತಾರೆ. ಈ ಮೂಲಕ ಅವರ ಮನಸ್ಸು ಅರಳಿಸುವುದಕ್ಕೆ ಒತ್ತು ನೀಡಲಾಗುತ್ತಿದೆ ಎನ್ನುತ್ತಾರೆ ದಿನೇಶ್ ಹೊಳ್ಳ.

ಕೈಜೋಡಿಸಿದವರು: ಅನಿವಾಸಿ ಭಾರತೀಯ ಉದ್ಯಮಿ ವಾಸುದೇವ ಐತಾಳ್ ಖರ್ಚು -ವೆಚ್ಚಗಳ ಪ್ರಾಯೋಜಕತ್ವ ವಹಿಸಿಕೊಂಡರೆ ಮಂಗಳೂರಿನ ಶೂರ್‌ಪಾಸ್‌ನ ಅನಂತ ಪ್ರಭು, ಛಾಯಾಗ್ರಾಹಕ ವಿವೇಕ್ ಗೌಡ, ತರ್ಜನಿ ಸಂಸ್ಥೆಯ ಸಂಜಯ ಪ್ರಭು, ಸಿಎ ಶಾಂತಾರಾಮ ಶೆಟ್ಟಿ ಮತ್ತಿತರರು ಮ್ಯಾಜಿಕ್ ಸ್ಲೇಟ್, ಲೈಟ್, ಬ್ಯಾಗ್, ಸ್ಟೇಷನರಿ ಇತ್ಯಾದಿ ವಸ್ತುಗಳನ್ನು ಪ್ರಾಯೋಜಿಸಿದರು. ಹೊಳ್ಳರೊಂದಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಅರವಿಂದ ಕುಡ್ಲ, ಮಮತಾ, ಸಹಮತ, ಗಿರಿಧರ ಕಾಮತ್, ರಾಜೇಶ್ವರಿ ಸಿದ್ಧಿ, ಗಿರಿ ಚಿನ್ಮಯಿ ಮೊದಲಾದವರು ವಿವಿಧ ತರಬೇತಿಯ ಹೊಣೆ ಹೊತ್ತುಕೊಂಡರು.

ಅಡವಿ ಮಕ್ಕಳಿಗೆ ಹೇಗೂ ಖುಷಿ ಇದೆ. ಅದಕ್ಕಿಂತಲೂ ಅವರ ಹೆತ್ತವರಿಗೆ, ಶಿಕ್ಷಕರಿಗೆ ದೂರದ ಮಂಗಳೂರಿನಿಂದ ಇಲ್ಲಿಗೆ ಬಂದು ನಮಗೆ ಏನೋ ನೆರವು ನೀಡುತ್ತಿದ್ದಾರೆ ಎಂಬುವ ವಿಶೇಷ ಖುಷಿ ಇತ್ತು. ಅದರಿಂದಾಗಿ ನಮ್ಮ ಉತ್ಸಾಹವೂ ಹೆಚ್ಚಿತು.

ದಿನೇಶ್ ಹೊಳ್ಳ, ಸಹ್ಯಾದ್ರಿ ಸಂಚಯ