ಜಿಲ್ಲೆ

ನಕ್ಸಲ್ ಪೀಡಿತ ಮತಗಟ್ಟೆಯಲ್ಲಿ ಮತದಾನ ಶಾಂತಿಯುತ

reportermys

ಮಡಿಕೇರಿ:

ಹಿಂದೊಮ್ಮೆ ನಕ್ಸಲರು ಭೇಟಿ ಕೊಟ್ಟಿದ್ದರಿಂದ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ವಣಚಲು ಗ್ರಾಮದ ಮತಗಟ್ಟೆಯನ್ನು ನಕ್ಸಲ್ ಪೀಡಿತ ಮತಗಟ್ಟೆ ಎಂದು ಗುರುತಿಸಲಾಗಿದೆ. ಹಾಗಾಗಿ ಇಲ್ಲಿನ ಮತಗಟ್ಟೆ ಬಗ್ಗೆ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸುತ್ತದೆ. ಶಶಸ್ತ್ರಧಾರಿ ಯೋಧರನ್ನು ಇಲ್ಲಿ ಬಂದೋಬಸ್ಥ್‌ಗಾಗಿ ನಿಯೋಜಿಸುವ ಪರಿಪಾಟ ಬೆಳೆದಿದೆ. ನಕ್ಸಲ್‌ಪೀಡಿತ ಹಣೆಪಟ್ಟಿ ಹೊತ್ತಿರುವ ವಣಚಲು ಮತಗಟ್ಟೆಯಲ್ಲಿ ಬುಧವಾರ ಶಾಂತಿಯುತವಾಗಿ ಮತದಾನ ನಡೆಯಿತು.

೨೦೮ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ವಣಚಲು ಗ್ರಾಮಕ್ಕೆ ಕೆಲವು ವರ್ಷಗಳ ಹಿಂದೆ ನಕ್ಸಲರು ಆಗಮಿಸಿದ್ದರು. ಇಲ್ಲಿಯ ಮನೆಯೊಂದಕ್ಕೆ ಭೇಟಿ ನೀಡಿ ಉಟ ಮಾಡಿ ಆಹಾರ ವಸ್ತುಗಳನ್ನೂ ಪಡೆದುಕೊಂಡು ಹೋಗಿದ್ದರು. ಇದೇ ಸಂದರ್ಭದಲ್ಲಿ ಇಲ್ಲೇ ಹತ್ತಿರದಲ್ಲಿರುವ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರ ತವರು ಗ್ರಾಮಕ್ಕೂ ನಕ್ಸಲರು ತೆರಳಿದ್ದರು. ಈ ಮಾರ್ಗವನ್ನು ನಕ್ಸಲರು ಚಿಕ್ಕಮಗಳೂರು ಮತ್ತು ಕೇರಳದ ಮಧ್ಯೆ ಓಡಾಡುವ ಕಾರಿಡಾರ್ ರೀತಿ ಬಳಸಿಕೊಳ್ಳುತ್ತಿದ್ದರು ಎನ್ನುವ ಮಾತುಗಳಿದ್ದವು. ಇತ್ತೀಚಿನ ಕೆಲವು ವರ್ಷಗಳಲ್ಲಿ ಜಿಲ್ಲೆಯಲ್ಲಿ ನಕ್ಸಲರ ಚಲನವಲನ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಕಂಡುಬಂದಿಲ್ಲ. ಆದರೆ ವಣಚಲು ಗ್ರಾಮ ದಾಖಲೆಗಳಲ್ಲಿ ನಕ್ಸಲ್ ಪೀಡಿತ ಗ್ರಾಮವಾಗಿಯೇ ಮುಂದುವರಿದಿದೆ.

ಇಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ ೧೨೪ ನಕ್ಸಲ್ ಪೀಡಿತ ಮತಗಟ್ಟೆ ಎಂದು ಗುರುತಿಸಲಾಗುತ್ತಿದೆ. ಇಲ್ಲಿ ಮತದಾನದ ಸಂದರ್ಭ ಸ್ಥಳೀಯ ಪೊಲೀಸರ ಜತೆಗೆ ಶಸ್ತ್ರಸಜ್ಜಿತ ಯೋಧರನ್ನೂ ಬಳಸಿಕೊಳ್ಳಲಾಗುತ್ತದೆ. ಈ ಹಿಂದಿನ ಮತದಾನದ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಸುರಕ್ಷತೆಗಾಗಿ ಮರಳಿನ ಮೂಟೆಗಳ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಈ ಬಾರಿ ಅಂತಹ ಯಾವುದೇ ದೃಶ್ಯ ಕಂಡುಬಂದಿಲ್ಲ. ಸಶಸ್ತ್ರಧಾರಿ ಯೋಧರು ಮಾತ್ರ ಮತಗಟ್ಟೆಯನ್ನು ಕಾಯುತ್ತಿದ್ದರು.

ವಣಚಲು ಪುಟ್ಟ ಗ್ರಾಮ. ಇಲ್ಲಿ ೧೯೦ ಮಂದಿ ಮತದಾರರು ಮಾತ್ರ ಇದ್ದಾರೆ. ಬುಧವಾರ ಬೆಳಗ್ಗೆ ೧೧.೩೦ರ ಸುಮಾರಿಗೆ ೧೦೪ ಮಂದಿ ಮತದಾನ ಮಾಡಿ ತೆರಳಿದ್ದರು. ೭, ೮ ಮಂದಿ ಅನಿವಾರ್ಯ ಕಾರಣಗಳಿಂದ ಪರ ಊರಿನಲ್ಲಿದ್ದು ಉಳಿದವರು ಸಂಜೆ ಒಳಗೆ ತಮ್ಮ ಹಕ್ಕು ಚಲಾಯಿಸುತ್ತಾರೆ ಎಂದು ಸ್ಥಳೀಯರು ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿ ಯಾವುದೇ ನಕ್ಸಲ್ ಚಟುವಟಿಕೆ ಇಲ್ಲದಿದ್ದರೂ ತಮ್ಮ ಗ್ರಾಮವನ್ನು ನಕ್ಸಲ್‌ಪೀಡಿತ ಎಂದು ಗುರುತಿಸುತ್ತಿರುವ ಬಗ್ಗೆ ಸ್ಥಳೀಯರಿಗೆ ಬೇಸರವಿದೆ.

ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾಗಿರುವ ವಣಚಲು ಭಾಗದಲ್ಲಿ ೨೦೧೮ರ ಪ್ರಾಕೃತಿಕ ವಿಕೋಪ ಸಂದರ್ಭ ಅಲ್ಲಲ್ಲಿ ಭೂಕುಸಿತಗಳು ಸಂಭವಿಸಿದ್ದವು. ನಂತರದ ದಿನಗಳಲ್ಲಿ ಗ್ರಾಮಸ್ಥರು ನಿಧಾನಕ್ಕೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ತಮ್ಮ ಗ್ರಾಮದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸ್ಥಳೀಯರಿಗೆ ಯಾವುದೇ ಕೊರತೆ ಕಂಡುಬರುತ್ತಿಲ್ಲ. ಗ್ರಾಮಸ್ಥರು ಸರಿಯಾಗಿದ್ದು, ಜನಪ್ರತಿನಿಧಿಗಳ ಹತ್ತಿರ ಕೆಲಸ ಮಾಡಿಸಿಕೊಳ್ಳುವ ಸಾಮರ್ಥ್ಯ ಇದ್ದರೆ ಯಾವುದೇ ಊರು ಅಭಿವೃದ್ಧಿಯಲ್ಲಿ ಹಿಂದುಳಿಯಲು ಸಾಧ್ಯವಿಲ್ಲ ಎನ್ನುವುದು ಇಲ್ಲಿಯವರ ಅಭಿಪ್ರಾಯ.

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದಕ್ಷಿಣಕನ್ನಡದ ಸುಬ್ರಹ್ಮಣ್ಯಕ್ಕೆ ಇಲ್ಲಿಂದ ಹತ್ತಿರದ ದಾರಿ ಇದೆ. ಆದರೆ ಮೀಸಲು ಅರಣ್ಯದ ಮೂಲಕ ಈ ದಾರಿ ಸಾಗುವುದರಿಂದ ಅರಣ್ಯ ಇಲಾಖೆ ಆಕ್ಷೇಪ ಕಾರಣಕ್ಕೆ ರಸ್ತೆಯ ಅಭಿವೃದ್ಧಿ ಸಾಧ್ಯವಾಗಿಲ್ಲ. ಇಲ್ಲೇ ಸಮೀಪದಲ್ಲಿ ಟೀ ತೋಟವೂ ಇದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದೆ. ಸಮೀಪದ ಗಾಳಿಬೀಡು ವ್ಯಾಪ್ತಿಯಲ್ಲಿ ಪ್ರತಿಷ್ಠಿತ ರೆಸಾರ್ಟ್, ಐಷಾರಾಮಿ ಹೋಮ್‌ಸ್ಟೇಗಳಿದ್ದು ವಣಚಲು ಗ್ರಾಮಕ್ಕೆ ಇವು ವ್ಯಾಪಿಸಿದರೆ ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎನ್ನುವುದು ಸ್ಥಳೀಯರ ನಿರೀಕ್ಷೆ.

ನಮ್ಮ ಊರು ಅಭಿವೃದ್ಧಿ ಆಗಿಲ್ಲ ಎಂದು ಜನಪ್ರತಿನಿಧಿಗಳನ್ನು ದೂರುವುದು ಸರಿಯಲ್ಲ. ನಾವು ಮತ ನೀಡಿ ಗೆಲ್ಲಿಸಿದವರ ಹತ್ತಿರ ಕೆಲಸ ಮಾಡಿಸಿಕೊಳ್ಳುವ ಜಾಣ್ಮೆ ನಮ್ಮಲ್ಲಿ ಇರಬೇಕು. ನಮಗೆ ಏನು ಬೇಕೋ ಅದನ್ನು ಅಧಿಕಾರಯುತವಾಗಿ ಮಂಜೂರು ಮಾಡಿಸಿಕೊಳ್ಳುವ ಸಾಮರ್ಥ್ಯ ಸ್ಥಳೀಯರಿಗೆ ಇದ್ದರೆ ನಮ್ಮೂರಿಗೆ ಸವಲತ್ತುಗಳು ಇಲ್ಲ ಎಂದು ಕೊರಗುವುದಕ್ಕೆ ಅವಕಾಶ ಇರುವುದಿಲ್ಲ.
ಸುಬ್ಬಯ್ಯ, ವಣಚಲು ನಿವಾಸಿ

ಚುನಾವಣೆ ಎನ್ನುವುದು ನಮ್ಮನ್ನು ಆಳುವವರನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಇರುವ ಅವಕಾಶ. ಮತದಾನ ಸಂವಿಧಾನ ನಮಗೆ ಕೊಟ್ಟಿರುವ ಪ್ರಬಲ ಅಸ್ತ್ರ. ಈ ಅಸ್ತ್ರವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿದಾಗ ಸದೃಢ ಮತ್ತು ಸುಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಧ್ಯ.
ಲೀಲಾವತಿ, ವಣಚಲು ನಿವಾಸಿ