ಜಿಲ್ಲೆ

ಜನವನ ಸೇತು ವಾಹನ ಸೇವೆ ಪುನರಾರಂಭ

ಎ. ಆರ್. ರಘುರಾಮ

ಹನೂರು: ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗ್ರಾಮಗಳಿಗೆ ಸೇವೆಗೆ ಕಲ್ಪಿಸಲಾಗಿದ್ದ ಜನವನ ಸೇತು ವಾಹನ ಸಂಚಾರ ಪುನರಾರಂಭಕ್ಕೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಮಹದೇಶ್ವರ ಬೆಟ್ಟದ ತಪೋಭವನದ ಆವರಣದಲ್ಲಿ ಚಾಲನೆ ನೀಡಿದ್ದು, ಇದರ ನಿರ್ವಹಣೆಯನ್ನು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಯಿತು.
ಮ.ಬೆಟ್ಟ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಾದ ಇಂಡಿಗನತ್ತ, ಪಡಸಲನತ್ತ, ತೊಕೆರೆ, ಮೆದಗನಾಣೆ, ಎಲಚಿಕೆರೆ, ದೊಡ್ಡಾಣೆ ಸೇರಿದಂತೆ ಈ ಭಾಗದ ಇನ್ನಿತರೆ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ಧೇಶದಿಂದ ಕಳೆದ ಒಂದೂವರೆ ವರ್ಷದ ಹಿಂದೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಏಡುಕುಂಡಲು ಅವರು 4 ಜನವನ ಸೇತು ವಾಹನವನ್ನು ಸೇವೆಗೆ ಕಲ್ಪಿಸಿದ್ದರು. ಇದರಿಂದ ಜನರು ಪಡಿತರ ಪದಾರ್ಥಗಳನ್ನು ಸಾಗಿಸಲು, ಗರ್ಭಿಣಿಯರು, ಬಾಣಂತಿಯರು ಹಾಗೂ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಜತೆಗೆ ಇನ್ನಿತರೆ ಗ್ರಾಮಗಳಿಗೆ ತೆರಳಲು ಅನುಕೂಲವಾಗಿತ್ತು. ಅಲ್ಲದೇ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಿ, ಆಗಮಿಸಲು ಸಹಕಾರಿಯಾಗಿತ್ತು. ಆದರೆ ಏಡುಕುಂಡಲು ವರ್ಗಾವಣೆಯಾದ ಬಳಿಕ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನಲೆ ಈ ವಾಹನಗಳ ಸಂಚಾರವನ್ನು ಆರಂಭಿಸಿ ನಿರ್ವಹಣೆಯನ್ನು ಗ್ರಾಮ ಅರಣ್ಯ ಸಮಿತಿಗೆ ವಹಿಸಲಾಗಿತ್ತು. ಆದರೆ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಮತ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ರೈತಪರ ಸಂಘಟನೆಗಳು ಹಾಗೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ವಾಹನಗಳನ್ನು ಸಂಚಾರವನ್ನು ಪುನರಾರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಡಿಸಿಎಫ್ ಅವರಲ್ಲಿ ಹಲವು ಬಾರಿ ಮನವಿ ಮಾಡಿದ್ದರು.
ಈ ಹಿನ್ನಲೆ ಜನವನ ಸೇತು ವಾಹನಗಳ ಸಂಚಾರ ಪುನರಾರಂಭಕ್ಕೆ ಸಚಿವರಿಂದ ಚಾಲನೆ ನೀಡಲಾಯಿತು. ಈ ಸಂಬಂಧ ಮಾತನಾಡಿದ ಅವರು, ಈ ವಾಹನಗಳ ನಿರ್ವಹಣೆಯನ್ನು ಅರಣ್ಯ ಇಲಾಖೆಯಿಂದ ಬಿಡುಗಡೆಗೊಳಿಸಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದ್ದು, ಗ್ರಾಮಗಳಿಗೆ ಸಂಚರಿಸಲಿವೆ. ಸಂಚರಿಸುವ ಜನರಿಗೆ ಇಂತಿಷ್ಟೇ ಹಣವನ್ನು ಪ್ರಾಧಿಕಾರ ನಿಗಧಿಪಡಿಸಲಿದೆ ಎಂದು ತಿಳಿಸಿದರು.
ಶಾಸಕ ಎಂ.ಆರ್ ಮಂಜುನಾಥ್, ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್, ಜಿಪಂ ಸಿಇಒ ಅನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹೂ, ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಉಪ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಇನ್ನಿತರರು ಇದ್ದರು.