ಜಿಲ್ಲೆ

ಕೃಷಿ ಕ್ಷೇತ್ರಕ್ಕೆ ನಾಲ್ವಡಿ ಕೊಡುಗೆ ಅಪಾರ

ಹಿರಿಯೂರು: ತಾಲೂಕಿನ ನೀರಾವರಿ-ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿರುವ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ನಗರದ ಪ್ರಧಾನ ರಸ್ತೆಗೆ ನಾಮಕರಣ ಮಾಡುವ ಮೂಲಕ ಅವರನ್ನು ಸ್ಮರಿಸುವ ಕೆಲಸ ಮಾಡಲಾಗುವುದು ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ನೆಹರು ಮೈದಾನದಲ್ಲಿನ ರೋಟರಿ ಎ.ಕೃಷ್ಣಪ್ಪ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ವಿದ್ಯಾಧಿಕಾರಿ ಎಚ್.ಎಂ. ಬಸವರಾಜ್ ಅವರ ‘‘ನಡೆದ ಹಾದಿ, ಉಳಿದ ಚಿತ್ರ’’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಭಾರತದಲ್ಲಿ ಗುರು ಪರಂಪರೆಗೆ ಶ್ರೇಷ್ಠ ಸ್ಥಾನವಿದೆ, ಹಾಲಿ ಕರ್ತವ್ಯದಲ್ಲಿರುವ ಶಿಕ್ಷಕರು ಬಸವರಾಜ್ ಅವರಂತಹ ಹಿರಿಯ ಶಿಕ್ಷಕರ ಮಾರ್ಗದರ್ಶನ ಪಡೆದು ಕಲಿಕೆಯಲ್ಲಿ ಸುಧಾರಣೆ ತಂದುಕೊಳ್ಳಬೇಕು ಎಂದು ತಿಳಿಸಿದರು.

ಕವಿ ಡಾ.ಲೋಕೇಶ ಅಗಸನಕಟ್ಟೆ ಮಾತನಾಡಿ, ಆತ್ಮಕತೆ ಬರೆಯುವವರು ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುವ ಬದಲು ಬದುಕಿನ ವಾಸ್ತವಿಕತೆಯ ಚಿತ್ರಗಳನ್ನು ಓದುಗರ ಕಣ್ಮುಂದೆ ಬಿಚ್ಚಿಡಬೇಕು ಎಂದು ಹೇಳಿದರು.

ಸತ್ಯಸಂಗತಿಗಳನ್ನು ಮುಕ್ತವಾಗಿ ಹೇಳಿಕೊಂಡಾಗ ಕೃತಿ ಓದುಗರ ಮನಸ್ಸಿನಲ್ಲಿ ಬಹುಕಾಲ ನೆಲೆ ನಿಲ್ಲುತ್ತದೆ. ಬಸವರಾಜ್ ಬರಹಗಾರರಲ್ಲ. ಆದರೆ, ಪುಸ್ತಕದಲ್ಲಿನ ನಿರೂಪಣೆ ಮನ ಮುಟ್ಟುವ ರೀತಿಯಲ್ಲಿದೆ. ವಿಚಾರಗಳು ನೇರವಾಗಿವೆ. ತಮ್ಮನ್ನು ವೈಭವೀಕರಿಸುವ ಗೋಜಿಗೆ ಅವರು ಹೋಗಿಲ್ಲ. ತಮ್ಮ ವೃತ್ತಿಯ ಅವಧಿಯಲ್ಲಿ ವಿವಿಧ ವಿಷಯಗಳ ಶಿಕ್ಷಕರ ಕ್ಲಬ್‌ಗಳ ಮೂಲಕ ಶಿಕ್ಷಕರಿಗೆ ನೀಡಿದ್ದ ತರಬೇತಿಯಿಂದ ಹಲವಾರು ಉತ್ತಮ ಶಿಕ್ಷಕರು ಸಮಾಜಕ್ಕೆ ದೊರಕಿದ್ದಾರೆ. ಪ್ರತಿ ಶಿಕ್ಷಕನಿಗೂ ತನ್ನದೆ ಶೈಲಿಯ ಪರಿಣಾಮಕಾರಿ ಬೋಧನಾ ವಿಧಾನವಿರಬೇಕು ಎಂದು ಅವರು ನಂಬಿದ್ದರುಎಂದು ಲೋಕೇಶ್ ತಿಳಿಸಿದರು.

ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಟಿ.ಎಂ.ಕುಮಾರ್, ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಕೆ.ವಿ. ವೆಂಕಟಾಚಲಪತಿ, ಹೊಸಪೇಟೆಯ ಸಾಹಿತಿ ಬಿ.ಎಂ. ರಾಜಶೇಖರ ಮಾತನಾಡಿದರು.

ಎಲೆ ಮರೆಯ ಕಾಯಿಯಂತೆ ಶಿಕ್ಷಣ ಇಲಾಖೆಯಲ್ಲಿ ಅನನ್ಯ ಸೇವೆ ಸಲ್ಲಿಸಿದ್ದ ಆರ್.ಪಾಂಡುರಂಗಯ್ಯ, ಆರ್. ಮಲ್ಲಿಕಾರ್ಜುನಯ್ಯ, ಸಿ.ಬಿ. ಶೈಲಾ, ನಿಂಗಪ್ಪ, ಏಕನಾಥ್ ಅವರನ್ನು ಎಚ್.ಎಂ.ಬಸವರಾಜ್ ಸನ್ಮಾನಿಸಿದರು. ಜಮೀರ್ ಅಹಮದ್, ಹಗರಿಬೊಮ್ಮನಹಳ್ಳಿಯ ಕೆ.ಎಂ.ತಿಪ್ಪೇಸ್ವಾಮಿ ಇತರರಿದ್ದರು.