ಜಿಲ್ಲೆ

ಬದುಕಿನಲ್ಲಿ ಮೌಲ್ಯಗಳ ಅನುಪಾಲನೆ ಅಗತ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತೀಯ ದಾರ್ಶನಿಕ ಜಗತ್ತು ಪ್ರತಿಪಾದಿಸಿದ ಮೇರು ಜೀವನ ಮೌಲ್ಯಗಳು ಮನುಕುಲದ ಜೊತೆಗಿವೆ. ಮೌಲ್ಯಾಧಾರಿತ ಜೀವನ ವಿಧಾನಕ್ಕೆ ಯಾವಾಗಲೂ ಶ್ರೇಷ್ಠತೆಯ ಮೆರಗು ಪ್ರಾಪ್ತವಾಗುತ್ತದೆ. ಹೀಗಾಗಿ ಬದುಕಿನಲ್ಲಿ ಮೌಲ್ಯಗಳ ಅನುಪಾಲನೆ ಅಗತ್ಯ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಅಮ್ಮಿನಬಾವಿ ಹಾಗೂ ಮರೇವಾಡ ಗ್ರಾಮಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 1995-96ನೇ ವರ್ಷದ ಹಳೇ ವಿದ್ಯಾರ್ಥಿಗಳು ಇತ್ತೀಚೆಗೆ ಏರ್ಪಡಿಸಿದ್ದ ಗುರುವಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬದುಕಿಗೆ ಮೌಲ್ಯಗಳ ಅವಶ್ಯಕತೆ ಎಷ್ಟು ಮುಖ್ಯವೋ, ಹಾಗೇ ಗುರುವಿನ ಮಾರ್ಗದರ್ಶನವೂ ಮುಖ್ಯ. ಲೌಕಿಕ ಇಲ್ಲವೇ ಅಲೌಕಿಕ ವಿದ್ಯಾರ್ಜನೆ ಇದ್ದರೂ ಅಲ್ಲಿ ಗುರು ಮುಖೇನ ಕಲಿತ ವಿದ್ಯೆಯು ಪರಿಪೂರ್ಣವಾಗಿರುತ್ತದೆ ಎಂದರು.

ಎಂ.ವಿ. ಹೊಸೂರ ಅಧ್ಯಕ್ಷತೆ ವಹಿಸಿದ್ದರು. ಎಸ್​.ಟಿ. ಹಿರೇಮಠ, ಶಿವಾನಂದ ಅಕ್ಕೋಜಿ, ಚೆನ್ನಬಸಪ್ಪ ಮಾಟರ, ಉಮೇಶ ನಡುವಿನಹಳ್ಳಿ, ಶಿವಯೋಗಿ ಚಂದರಗಿ ಇತರರು ಇದ್ದರು.

ಸಂತೋಷ ಕಮತರ ಸ್ವಾಗತಿಸಿದರು. ಶೋಭಾ ಸುಳ್ಳದ ನಿರೂಪಿಸಿದರು. ಶಿವಲೀಲಾ ಹುಲ್ಲೂರ ವಂದಿಸಿದರು.