ಸಿಂಧನೂರು: ವಚನಗಳಲ್ಲಿರುವ ತಾತ್ವಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಇಂದಿನ ಕಾಲಕ್ಕೆ ಅನ್ವಯಿಸಿಕೊಳ್ಳಬೇಕಿದೆ ಎಂದು ಅನುಭಾವಿ ಮಿಟ್ಟಿಮಲ್ಕಾಪುರದ ನಿಜಾನಂದ ಸ್ವಾಮೀಜಿ ಹೇಳಿದರು.
ನಗರದ ಬಸವಕೇಂದ್ರ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಸಂಸ್ಕಾರದ ಬದುಕಿಗಾಗಿ ವಚನ ಶ್ರವಣ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ನಮ್ಮ ಕಾಯ ದೇವರು ನೀಡಿದ ಪ್ರಸಾದವಾಗಿದ್ದು, ಇದನ್ನು ಹಾಳು ಮಾಡಿಕೊಳ್ಳದೆ ಆರೋಗ್ಯವಾಗಿಟ್ಟುಕೊಳ್ಳಬೇಕು. ನಾವು ಸೇವಿಸುವ ಆಹಾರವನ್ನು ಶಿವ ಶಿವ ಎಂದು ಸ್ವೀಕರಿಸಬೇಕು. ಈ ಕಾಯ ಮತ್ತೆ ಮತ್ತೆ ಬರೋದಿಲ್ಲ. ಇದ್ದಾಗ ಗಳಿಸಿದ ಸಂಪತ್ತು ನಮ್ಮ ಹಿಂದೆ ಬರಲ್ಲ. ನಮ್ಮ ಹಿಂದೆ ಬರುವ ಸಂಗತಿಗಳು ಎರಡೇ ಒಂದು ಪಾಪ ಇನ್ನೊಂದು ಪುಣ್ಯ. ನಮ್ಮ ಬದುಕಿಗೆ ಧಕ್ಕೆ ತಂದುಕೊಳ್ಳದೆ ಮೌಲ್ಯಯುತ ಜೀವನ ನಡೆಸಬೇಕೆಂದರು.
ಬಳಗಾನೂರು ಮಠದ ಸಿದ್ದಬಸವಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ಲಿಂಗಾಯತ ಧರ್ಮ ಗ್ರಂಥವಾಗಿರದೆ, ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆಯಾಗಿವೆ ಎಂದರು. ಸಾನ್ನಿಧ್ಯವನ್ನು ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ ವಹಿಸಿದ್ದರು.
ಯುವ ಬಸವಕೇಂದ್ರದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹೊಗರನಾಳ, ಸಿದ್ದರಾಮಪ್ಪ ಸಾಹುಕಾರ ಮಾಡಸಿರವಾರ, ಬಸವಕೇಂದ್ರ ಅಧ್ಯಕ್ಷ ಕರೇಗೌಡ ಪೊ.ಪಾ. ಕುರುಕುಂದ, ಬಸವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುದನಗೌಡ ಪಾಟೀಲ್, ಮಹಿಳಾ ಬಸವಕೇಂದ್ರದ ತಾಲೂಕು ಅಧ್ಯಕ್ಷೆ ಸುಮಂಗಲ ಎಸ್.ಚಿಂಚರಕಿ, ತಾಲೂಕು ಲಾಳಗೊಂಡ ಸಮಾಜದ ಅಧ್ಯಕ್ಷ ಶರಣಬಸವ ವಕೀಲ, ಚಂದ್ರೇಗೌಡ ಹರೇಟನೂರು, ಲತಾ ಚಂದ್ರೇಗೌಡ ಇದ್ದರು.