ಕಡೂರು: ಉತ್ತಮ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣ ಮಾಡಲು ಜಾನಪದ ಸಂಸ್ಕೃತಿಯಿಂದ ಮಾತ್ರ ಸಾಧ್ಯ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದರು.
ಮುದಿಗೆರೆ ಗ್ರಾಮದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ ಹೋಬಳಿ ಮಟ್ಟದ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಸೊಗಡನ್ನು ಸಮೃದ್ಧ ವಾಗಿ ಹಿಡಿದಿಟ್ಟಿರುವ ಜಾನಪದ ಸಂಸ್ಕೃತಿಯ ಮಹತ್ವವನ್ನು ಯುವ ತಲೆಮಾರಿಗೆ ಪರಿಚಯಿಸುವ ಕಾರ್ಯವಾಗಬೇಕಿದೆ. ಪ್ರಪಂಚದ ಎಲ್ಲ ಸಂಸ್ಕೃತಿ, ಸಾಹಿತ್ಯ, ನಾಗರಿಕತೆಗಳ ತಾಯಿ ಬೇರು ಜಾನಪದ. ಈ ನಿಟ್ಟಿನಲ್ಲಿ ಪರಿಷತ್ ಘಟಕ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಮ್ಮೇಳನಾಧ್ಯಕ್ಷತೆ ವಹಿಸಿ ಹಿರಿಯ ಜಾನಪದ ಕಲಾವಿದ ಹನುಮಂತಪ್ಪ ಮಾತನಾಡಿ, ನನ್ನ ಜಾನಪದ ಕಲೆಯ 40 ವರ್ಷಗಳ ಸೇವೆಗೆ ಸಂದ ಗೌರವ ಇದಾಗಿದೆ. ನನ್ನ ಕಲಾ ಸೇವೆಗೆ ಇನ್ನಷ್ಟು ಸ್ಫೂರ್ತಿ ಸಿಕ್ಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜನಪದ ಕಲೆ ಆಚರಣೆಗಳನ್ನು ಉಳಿಸಿಕೊಂಡು ಬರಲಾಗಿದೆ. ಅವುಗಳನ್ನು ನಗರ ಪ್ರದೇಶಗಳಿಗೂ ತಲುಪಿಸಬೇಕಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಜಾನಪದ ಸಂಸ್ಕೃತಿಯ ತಳಹದಿ ಮೇಲೆ ಭಾರತೀಯ ಸಂಸ್ಕೃತಿ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಆದರೆ ಇಂದು ಕೆಲವು ಪಾಶ್ಚಾತ್ಯ ಸಂಸ್ಕೃತಿ, ಸಾಹಿತ್ಯ ಸಂಗೀತ, ಕಲೆಗಳ ದಾಳಿಯಿಂದ ನಮ್ಮ ಜಾನಪದ ಕಲೆ ಸಂಸ್ಕೃತಿಗೆ ಧಕ್ಕೆಯಾಗಿದೆ. ಆದ್ದರಿಂದ ಅದನ್ನು ಗಟ್ಟಿಗೊಳಿಸಲು ಹೆಚ್ಚು ಹೆಚ್ಚು ಜಾನಪದ ಸಮ್ಮೇಳನ, ತರಬೇತಿ ಕಾರ್ಯಗಾರಗಳು, ಶಿಬಿರಗಳು, ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಲುಪಿಸಲು ಜಾನಪದ ಪರಿಷತ್ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದರು.
ಅಜ್ಜಂಪುರ ತಹಸೀಲ್ದಾರ್ ಶಿವಶಂಕರಪ್ಪ ಕಟ್ಟೋಳಿ ಮಾತನಾಡಿ, ಜಾನಪದ ಸಂಸ್ಕೃತಿಯಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಸಾಧ್ಯ. ಇಂದಿನ ಮಕ್ಕಳಿಗೆ ಮೌಲ್ಯಧಾರಿತ ಗುಣ ಕಲಿಸಲು ನಾವು ಜಾನಪದ ಕಲೆ,ಸಾಹಿತ್ಯ, ಸಂಗೀತ, ನೃತ್ಯ ಕಲೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಮಕ್ಕಳಿಗೆ ತಮ್ಮ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಳ್ಳಲು ತಿಳಿವಳಿಕೆ ನೀಡಬೇಕುಎಂದರು.
ಹಿರಿಯ ಸಾಹಿತಿ ಹೊಸೂರು ಪುಟ್ಟರಾಜ ಮಾತನಾಡಿ. ಜಾನಪದ ಸಂಸ್ಕೃತಿಗೆ ಸಮಾಜ ಒಗ್ಗೂಡಿಸುವ, ಐಕ್ಯತೆ ಸಾಸುವ, ಧಾರ್ಮಿಕ ಸಹಿಷ್ಣುತೆ ಪರಿಪಾಲಿಸುವ, ಅಹಿಂಸೆ. ಮತ್ತು ಶಾಂತಿ ನೆಲೆಗೊಳಿಸುವ ಶಕ್ತಿ ಇದೆ ಎಂದು ತಿಳಿಸಿದರು.