ಜಿಲ್ಲೆ

ಮಕ್ಕಳಿಗೆ ಮಾನವೀಯ ಮೌಲ್ಯ ಕಲಿಸಿ

ಎ. ಆರ್. ರಘುರಾಮ

ಚನ್ನರಾಯಪಟ್ಟಣ : ಅಂಕಗಳಿಗೆ ಮಾತ್ರ ಮಾನ್ಯತೆ ಕೊಡುವುದನ್ನು ಬಿಟ್ಟು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಲು ಮುಂದಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಮಲ್ಲೇಶ್‌ಗೌಡ ಹೇಳಿದರು. ಪಟ್ಟಣದಲ್ಲಿನ ಅಕ್ಷರ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಕ್ಷರೋತ್ಸವ-2024 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದಿನ ಶಿಕ್ಷಣ ಕೇವಲ ಪರೀಕ್ಷೆಗೆ ಸಂಬಂಧಿಸಿದ್ದಾಗಿದೆ. ಪರೀಕ್ಷೆಗಳಲ್ಲಿ ಅಂಕಗಳ ಸುತ್ತ ಗಿರಾಕಿ ಹೊಡೆಯುವ ಪದ್ಧತಿ ಇದೆ. ಪಾಲಕರೂ ಇದನ್ನೆ ಬಯಸುತ್ತಿದ್ದಾರೆ. ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿಟ್ಟು ಓದಿಸುವ ಪದ್ಧತಿ ಸಲ್ಲದು ಎಂದರು. ಮಕ್ಕಳನ್ನು ನೆಂಟರಿಷ್ಟರು, ಅತಿಥಿಗಳೊಂದಿಗೆ ಬೆರೆಯಲು ಬಿಡಬೇಕು. ನೈಸರ್ಗಿಕವಾಗಿ ಮಕ್ಕಳನ್ನು ಬೆಳೆಸದಿದ್ದ ಕಾರಣದಿಂದ ಅವರು ಮೌಲ್ಯಗಳಿಂದ ದೂರಾಗಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು. ಮಕ್ಕಳು ಅರಳಬೇಕು, ಹಾಡಬೇಕು, ಭಾವನೆಗಳನ್ನು ಕನ್ನಡದಲ್ಲಿ ಹಂಚಿಕೊಳ್ಳಬೇಕು, ಅಂತಹ ಭಾವನೆಯನ್ನು ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮತ್ತು ಪಾಲಕರು ಮಾಡಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಹಿನ್ನೆಲೆ ಗಾಯಕಿ ಜೋಗಿ ಸುನೀತಾ ಅವರು ಜೋಗಿ ಸಿನಿಮಾದ ಗೀತೆ ಗಳನ್ನು ಹಾಡಿ ಜನಸಮೂಹವನ್ನು ರಂಜಿಸಿದರು. ಬಿಇಒ ದೀಪಾ, ಸಂಸ್ಥೆ ಕಾರ್ಯದರ್ಶಿ ಎಂ.ಆರ್. ಅನಿಲ್‌ಕುಮಾರ್, ಅಧ್ಯಕ್ಷೆ ಪಿ. ಸರೋಜಾದೇವಿ ಮಂಜಪ್ಪ, ಖಜಾಂಚಿ ಸಿ.ಸಿ. ಚೇತನ್, ಟ್ರಸ್ಟಿಗಳಾದ ಎಂ.ಆರ್. ವಿನುತಾ, ಸಿ.ಎಂ.ತಿರುಮಲ ಪ್ರಸಾದ ಮತ್ತು ಪ್ರಾಂಶುಪಾಲರಾದ ರೂಪಾ ಅಶೋಕ್‌ಶೆಟ್ಟಿ ಹಾಜರಿದ್ದರು.ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.