ಜಿಲ್ಲೆ

ಹಿರೇಕೆರೂರಲ್ಲಿ ಮೌಲ್ಯಯುತ ರಾಜಕಾರಣ ಮುಂದುವರಿಕೆ, ಮತದಾರರಿಗೆ ಕೃತಜ್ಞತೆ ಸಮರ್ಪಣೆ

ರಟ್ಟಿಹಳ್ಳಿ: ಜಿ.ಬಿ. ಶಂಕರರಾವ, ಬಿ.ಜಿ. ಬಣಕಾರ ಮತ್ತು ಬಿ.ಎಚ್. ಬನ್ನಿಕೋಡ ಆಡಳಿತದ ಅವಧಿಯಲ್ಲಿ ಕಂಡಿದ್ದ ಮೌಲ್ಯಯುತ ರಾಜಕಾರಣ ಇತ್ತೀಚಿನ ಅವಧಿಯಲ್ಲಿ ಮರೀಚಿಕೆಯಾಗಿತ್ತು. 2023ರ ಚುನಾವಣೆಯ ನಂತರದಲ್ಲಿ ತಾಲೂಕಿನಲ್ಲಿ ಮೌಲ್ಯಯುತ ಮತ್ತು ನ್ಯಾಯಸಮ್ಮತ ರಾಜಕಾರಣ ಮುಂದುವರಿಯುತ್ತದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ರಟ್ಟಿಹಳ್ಳಿ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಭಾನುವಾರ ಮತದಾರರಿಗೆ ಕೃತಜ್ಞಾತ ಸಮರ್ಪಣೆ ಮತ್ತು ನೂತನ ಶಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ಜೀವನದಲ್ಲಿ ಕೃತಜ್ಞತೆ ಎಂಬುದು ಅತೀ ಮುಖ್ಯ. ಚುನಾವಣೆಯಲ್ಲಿ ಜನಬಲವೇ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಹಣ ಬಲ ನಡೆಯುವದಿಲ್ಲವೆಂದು ಈ ಬಾರಿಯ ಚುನಾವಣೆಯಲ್ಲಿ ಸಾಬೀತಾಗಿದೆ. ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಸರ್ಕಾರ ಜನಪರ, ಅಭಿವೃದ್ಧಿಪರ ಆಡಳಿತ ನೀಡುತ್ತದೆ. ಮುಂಬರುವ ಎಲ್ಲ ಸ್ಥಳೀಯ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲವು ಸಾಧಿಸಬೇಕಿದೆ. ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕಿನ ಜನತೆಯ ಪರವಾಗಿ ಪ್ರಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯಬಾರದು. ಇಲ್ಲವಾದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ರಾಜ್ಯದ ಜನತೆ ಬಿಜೆಪಿಯ ದುರಾಡಳಿತದಿಂದ ಬೇಸತ್ತು ರಾಜ್ಯದಲ್ಲಿ ಉತ್ತಮ ಮತ್ತು ನೆಮ್ಮದಿಯ ಆಡಳಿತವನ್ನು ನೀಡುವ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಹಿರೇಕೆರೂರು ತಾಲೂಕಿನಲ್ಲಿ ಪ್ರಜ್ಞಾವಂತ ಮತದಾರರು ಅಹಂಕಾರ, ದರ್ಪದ ಆಡಳಿತಕ್ಕೆ ಮನ್ನಣೆ ನೀಡದೇ, ಸರಳ, ಸಜ್ಜನಿಕೆಯ ಯು.ಬಿ. ಬಣಕಾರ ಅವರಿಗೆ ಆಶೀರ್ವಾದ ಮಾಡಿದ್ದಾರೆ. ತುಂಗಾ ಮೇಲ್ದಂಡೆಯ ಕಾಲುವೆಗಳಲ್ಲಿ ಅಭಿವೃದ್ಧಿ ಕೆಲಸಗಳು ಅಪೂರ್ಣವಾಗಿದೆ. ಇವುಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಶಾಸಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.