ಮೈಸೂರು: ಶಿಕ್ಷಣ ನೀಡಲು ಹಲವು ಸಂಸ್ಥೆಗಳಿವೆ. ಆದರೆ ಮೌಲ್ಯಧಾರಿತ ಶಿಕ್ಷಣ ಕೆಲವೆಡೆ ಮಾತ್ರ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಸಮರ್ಥವಾಗಿವೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ನಗರದ ಶ್ರೀ ಶಿವರಾತ್ರಿ ರಾಜೇಂದ್ರ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿದರು.
ಒಂದು ಸರ್ಕಾರ ಮಾಡಬಲ್ಲ ಕೆಲಸಗಳನ್ನು ಸಂಸ್ಥೆ ಮಾಡುತ್ತಿದ್ದು, ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ವಿದ್ಯಾರ್ಥಿಗಳು ಕೂಡ ಸ್ಪಷ್ಟ ಗುರಿಯೊಂದಿಗೆ ಉತ್ತಮ ಸ್ಥಾನ ತಲುಪಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳಲ್ಲಿ ನನ್ನ ಶೈಕ್ಷಣಿಕ ಜೀವನದ ಅಮೂಲ್ಯವಾದ 8 ವರ್ಷಗಳನ್ನು ಕಳೆದಿದ್ದೇನೆ. ಇಲ್ಲಿ ದೊರೆತ ಅನುಭವ ನನ್ನ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್.ಜಯರಾಮ್ ಮಾತನಾಡಿ, ಆಶ್ರಯಕ್ಕಾಗಿ ಯಾವುದೇ ಹಣವಿಲ್ಲದೆ ಸ್ವಾಮೀಜಿ ಮುಂದೆ ನಿಂತಾಗ ನನ್ನ ಹಾಸ್ಟೆಲ್ ಅರ್ಜಿಯಲ್ಲಿ ಎಫ್‌ಎಫ್ ಎಂದು ಬರೆದು ಕಳಿಸಿದ್ದರು. ಎಫ್‌ಎಫ್ ಎಂದರೆ ಫುಲ್ ಫ್ರೀಯಾಗಿ ಹಾಸ್ಟೆಲ್ ಸೌಲಭ್ಯ ನೀಡಿ ಎಂದರ್ಥ. ಅವರ ಸಹಾಯ ನನ್ನ ಭವಿಷ್ಯ ರೂಪುಗೊಳ್ಳಲು ಸಹಕಾರಿಯಾಯಿತು ಎಂದು ಸ್ಮರಿಸಿದರು.
ಸ್ವಾಮೀಜಿ ದೂರದೃಷ್ಟಿಯುಳ್ಳವರಾಗಿದ್ದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಹ ತಮ್ಮ ಗುರುವಿನಂತೆ ಸ್ಪಷ್ಟ ಉದ್ದೇಶ ಹಾಗೂ ಅಂತಃಕರಣವುಳ್ಳ ಉತ್ತಾರಾಧಿಕಾರಿಯಾಗಿದ್ದಾರೆ. ಸುತ್ತೂರು ಪೀಠಕ್ಕೆ ಎಂತವರಿಗೂ ತಿಳಿ ಹೇಳುವ ಘನತೆಯಿದ್ದು, ಇಲ್ಲಿನ ಗುರು ಪರಂಪರೆಯೇ ಅದಕ್ಕೆ ಕಾರಣ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಮಹೇಶ್ವರಿ, ಜೆಎಸ್‌ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಲ್.ರೇವಣ್ಣ ಸಿದ್ದಯ್ಯ ಇತರರಿದ್ದರು.