ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ಮಂಜೇಶ್ವರ ತಾಲೂಕಿನ ಕೋಳ್ಯೂರಿನಲ್ಲಿ ಜನಿಸಿ ಕುಗ್ರಾಮದಂತಿದ್ದ ಕಾಂತಾವರವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು, ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ರಂಗಕ್ಕೆ ಬಲುದೊಡ್ಡ ಕೊಡುಗೆ ನೀಡುವ ಮೂಲಕ ಡಾ.ನಾ.ಮೊಗಸಾಲೆ ಅವರು ಕಾಂತಾವರದ ಕೀರ್ತಿ ಪತಾಕೆಯನ್ನು ನಾಡಿನಾದ್ಯಂತ ಪಸರಿಸಿದ್ದಾರೆ ಎಂಬುದಾಗಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ವಿಠಲ ಶೆಟ್ಟಿ ಬೇಲಾಡಿ ತಿಳಿಸಿದರು.
ಕನ್ನಡ ಸಾಹಿತ್ಯಪರಿಷತ್ತು ಕೇರಳ ಗಡಿನಾಡ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ಶಂಪಾ ಪ್ರತಿಷ್ಠಾನ ಬೆಂಗಳೂರು, ವಿಕಾಸ ಮೀಯಪದವು ಆಶ್ರಯದಲ್ಲಿ ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢ ಶಾಲೆಯ ನಾರಾಯಣೀಯಂ ರಂಗಮಂದಿರದಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡಪರ ಸಂಘಸಂಸ್ಥೆಗಳ ಸಹಕಾರದೊಂದಿಗೆ ನಡೆದ ಡಾ.ನಾ. ಮೊಗಸಾಲೆ ಪೌರಾಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಬೆಟ್ಟಂಪಾಡಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅಭಿನಂದನಾ ಭಾಷಣ ಮಾಡಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಸನ್ಮಾನ ಪತ್ರ ವಾಚಿಸಿದರು.
ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ.ಹರಿಕೃಷ್ಣ ಭರಣ್ಯ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ., ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ.ಸಾಲಿಯಾನ್, ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯದ ಅಧ್ಯಕ್ಷ ವಾಮನ ರಾವ್ ಬೇಕಲ್, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಪು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕಲಾಕುಂಚ ಗಡಿನಾಡು ಘಟಕಾಧ್ಯಕ್ಷೆ ಜಯಲಕ್ಷ್ಮೀ ಕಾರಂತ, ಮೀಯಪದವು ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್.ಎಂ, ಮುಖ್ಯಶಿಕ್ಷಕಿ ಮೃದುಲ, ಪ್ರೇಮಲತಾ ಮೊಗಸಾಲೆ, ಡಾ.ಎಸ್.ಎಲ್.ಮಂಜುನಾಥ್ ಬೆಂಗಳೂರು, ಡಾ.ಶಾರದಾ ಬೆಂಗಳೂರು ಉಪಸ್ಥಿತರಿದ್ದರು.
ಬೆಂಗಳೂರು ಶಂಪಾ ಪ್ರತಿಷ್ಠಾನ ಅಧ್ಯಕ್ಷೆ ಡಾ.ಪ್ರಮೀಳ ಮಾಧವ್ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ.ಪಿ.ಎನ್ ಮೂಡಿತ್ತಾಯ ವಂದಿಸಿದರು.