ಜಿಲ್ಲೆ

ವಾಲ್ಮೀಕಿ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ

Chitradurga

ಚಿತ್ರದುರ್ಗ: ವಿಶ್ವಕ್ಕೆ ರಾಮಾಯಣ ಗ್ರಂಥ ಲೋಕಾರ್ಪಣೆಗೊಳಿಸಿ ಶ್ರೀರಾಮನ ಮೂಲಕ ಸನ್ಮಾರ್ಗ ತೋರಿಸಿದ ಸಂತ ಶ್ರೇಷ್ಠ ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ತಮಟಕಲ್ಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ಮಹನೀಯರ ಆದರ್ಶ ಯುವಸಮೂಹ ಅಳವಡಿಸಿಕೊಂಡರೆ ಉತ್ತಮ ರಾಷ್ಟ್ರ ಮತ್ತು ಸಮಾಜ ನಿರ್ಮಿಸುವುದು ಕಷ್ಟಕರವಲ್ಲ. ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದರು.

ಮಾನವೀಯತೆಯ ಧರ್ಮ ಪ್ರತಿಪಾದಿಸಿದ ಮಹಾನ್ ಆದಿಕವಿ ಮಹರ್ಷಿ ವಾಲ್ಮೀಕಿ. ಅವರು ಬರೆದಿರುವ ಪ್ರತಿ ಶ್ಲೋಕ ಉತ್ತಮ ಜೀವನ ರೂಪಿಸಿಕೊಳ್ಳಲು ಸರ್ವರಿಗೂ ದಾರಿದೀಪವಾಗಿದೆ. ಇಡೀ ಭಾರತಕ್ಕೆ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದ ಅವರು, ವಾಲ್ಮೀಕಿ ನಾಯಕ ಸಮಾಜದ ಬಹು ವರ್ಷಗಳ ಬೇಡಿಕೆಯಾದ ಮೀಸಲಾತಿ ಹೆಚ್ಚಳಕ್ಕೆ ನ್ಯಾಯ ಒದಗಿಸುವ ಕೆಲಸ ಸರ್ಕಾರದಿಂದ ಆಗಿದೆ ಎಂದು ತಿಳಿಸಿದರು‌.

ನಗರಸಭೆ ಸದಸ್ಯ ವೆಂಕಟೇಶ್, ಪ್ರಾಂಶುಪಾಲ ಪ್ರೊ.ಗುಡ್ಡದೇಶ್ವರಪ್ಪ, ಮುಖಂಡರಾದ ರಮೇಶ್, ಸಣ್ಣ ಸ್ವಾಮಿ, ವೀರೇಶ್ ಮದಕರಿ, ಸುರೇಶ್, ಮಂಜುನಾಥ್, ಮಹಂತೇಶ್ ಇತರರಿದ್ದರು.